"ಇದು ವಿಮರ್ಶೆಯಲ್ಲದ ಚಿಂತನ"

Thursday, November 30, 2023

ವಿಷಾದೋಕ್ತಿ

ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ ಸಂದರ್ಭ ಬಂತು. ಕಾರಣ ಆದಿನದ ಪ್ರಸಂಗ ಬೇಡರಕಣ್ಣಪ್ಪ. ಅವರ ಜತೆ ಆತ್ಮೀಯ ಸಲುಗೆ ಇತ್ತು. ಅವರಲ್ಲಿ  ನಿಮಗೆ ಬೇರೆ ಪ್ರಸಂಗ ಸಿಗಲಿಲ್ಲವಾ ಎಂದು ಕೇಳಿದೆ. ಅವರು ನಗುತ್ತಾ ಹೇಳಿದರು ಇವರು ಕೊಡುವ ಎರಡು ಸಾವಿರಕ್ಕೆ ನಾನು ತಡ್ಪೆ (ಗೆರಸೆ) ಕಿರೀಟ ತರುವುದಕ್ಕೆ ಸಾಧ್ಯವಾ ಮಾರಾಯ? ಅವರು ಹೇಳಿರುವುದು ವಾಸ್ತವ. ಕಡಿಮೆ ಖರ್ಚಿನಲ್ಲಿ ಅಂತ ಆಗುವಾಗ ಎಲ್ಲದರಲ್ಲೂ ಒಂದಷ್ಟು ಹೊಂದಾಣಿಕೆಯಾಗುತ್ತದೆ. ಯಕ್ಷಗಾನ ಆಗ ಕೇವಲ ಯಕ್ಷಗಾನವಾಗುವುದಿಲ್ಲ. ಅದು ಏನೆಲ್ಲವಾಗಿ ಬದಲಾಗಿ ಪರಿಸ್ಥಿತಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ. ಯಕ್ಷಗಾನ ಏನಿಲ್ಲದೆಯೂ ಆಗಿಬಿಡುತ್ತದೆ. ಇದು ಹಾಸ್ಯ ವಿಡಂಬನೆಗೆ ಹೇಳುವುದಾದರೂ ಯಕ್ಷಗಾನಕ್ಕೆ ಸಂಬಂಧಿಸಿ ಇದು ವಿಷಾದ ಭಾವನೆಯನ್ನು ತಳೆಯುವಂತೆ ಮಾಡುತ್ತದೆ. 

ಯಕ್ಷಗಾನ ಅದೆಷ್ಟು ಮಧುರವಾದ ಶಬ್ಧ? ಹೆಸರಿನಲ್ಲೇ ಅದರ ಮಾರ್ದವತೆ ಅನುಭವಕ್ಕೆ ಬರುವ ರೀತಿ ಬಹುಶಃ ಯಾವ ಕಲೆಯ ಹೆಸರಲ್ಲಿಯೂ ಕಂಡುವರುವುದಿಲ್ಲ. ಆ ಮಾರ್ದವತೆಯ‌ ಮಿಡಿತ ಅದರಲ್ಲಿ ಸೇರಿಕೊಂಡ ರೀತಿ ಅದರ ಸುಸಂಸ್ಕೃತ ಗುಣಗಳಿಂದ.  ಈ ಗುಣಗಳು ನಮ್ಮ ಕಣ್ಣಳತೆಯ ಅವಧಿಯಲ್ಲಿ ಆಗಿ ಹೋದ ಆವಿಷ್ಕಾರ. ಈಗ ಅದು ನಮ್ಮ ಕಣ್ಣೆದುರಿಗೇ ಕುಸಿಯುತ್ತಿರುವ ಅನುಭವ. ಯಕ್ಷಗಾನವನ್ನು ಉಸಿರಾಗಿ ಕಂಡ ಹಿರಿಯರ ಅನಿಸಿಕೆ ಇದು. ಯಾಕೆಂದರೆ ಇದೆಲ್ಲದಕ್ಕೂ ಸಾಕ್ಷಿಯಾಗಿ ನಿಂತವರು. ಈಗ ಇದು ಬೇಡ ಎಂದು ದೂರ ಉಳಿದರೂ ಅದು ಯಾವುದೋ ರೂಪದಲ್ಲಿ ಮೈಮೇಲೆ ‌ಬಿದ್ದಂತಾಗುತ್ತದೆ. ಕೊಡವಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಹಾಯಕತೆ.

ಬಾಲ್ಯದಿಂದಲೇ ಕಲೆ ಎಂದರೆ ಅದು ಯಕ್ಷಗಾನ ಎಂಬಂತೆ ಸರ್ವವ್ಯಾಪಿಯಾಗಿ ಮನಸ್ಸಿನಲ್ಲಿ ಅಚ್ಚೊತ್ತಿರುವುದಕ್ಕೆ ಅದನ್ನು ಸರಳವಾಗಿ ಆಸ್ವಾದಿಸುವುದಕ್ಕೆ ಇದು ಅತಿ ಸೂಕ್ತವಾಗಿತ್ತು.ಕಠಿಣವಾದ ಜ್ಞಾನದ ಅರಿವಿನ ಅವಶ್ಯಕತೆ ಇಲ್ಲದ ಪಾಮರನೂ ಪಂಡಿತನೂ ಏಕರೀತಿಯಲ್ಲಿ ಅನುಭವಿಸ ಬಲ್ಲ ಗುಣ ಆ ಸೆಳೆತ ಅತಿಶಯವೇನೂ ಅಲ್ಲ. ಆದರೆ ಅದೇ ವ್ಯಾಪಕತೆ ಅದಕ್ಕೆ ಈಗ ಮುಳುವಾಗಿ ಪರಿಣಮಿಸಿದೆ.  ಯಕ್ಷಗಾನದ flexibility ಅದಕ್ಕೆ ಏನೂ ಸೇರಿಸಬಲ್ಲ ಆವಿಷ್ಕಾರವನ್ನು ತಂದಿದೆ.

        ನನಗೆ ಯಕ್ಷಗಾನದ ಸರಳತೆ ಅರ್ಥವಿಸಿದ ಒಂದು ಬಗೆಯಾದರೆ ಅದರಲ್ಲಿನ ವಿಷಯ ಮೌಲ್ಯ ಅರಿವಾದ ನಂತರ ಅದು ಹವ್ಯಾಸವಾಯಿತು.‌ ಬರಿದೇ ಓರ್ವ ಸಾಮಾನ್ಯ ಪ್ರೇಕ್ಷಕನಿಗೂ ತುಂಬಿ ಕೊಡಬಲ್ಲ ಜ್ಞಾನ ಸಂಪತ್ತು ಇಲ್ಲಿ ಸಿಗುವಾಗ ಇದು ಕೇವಲ ಕಲೆ ಹವ್ಯಾಸಕ್ಕೆ ಸೀಮಿತವಾಗಲಿಲ್ಲ. ಇದು ಅಧ್ಯಯನವಾಯಿತು.

        ಈಗ ನಮ್ಮ ಅರಿವು ಹೆಚ್ಚಾಯಿತೋ ಇಲ್ಲ ಭ್ರಮಾಧೀನರಾದೆವೋ ಸಂದೇಹ ಪಡುವಂತಾಗಿದೆ. ಯಕ್ಷಗಾನದ ಮೌಲ್ಯ ಕುಸಿಯುವಾಗ ಇನ್ನು ಇದರಲ್ಲಿ ಏನು ಉಳಿದಿದೆ ಎಂಬ ನಿರಾಸಕ್ತಿಯಲ್ಲಿ ಭ್ರಮೆ ಕಳಚಿಬಿಡುತ್ತದೆ. ಕಲ್ಪವೃಕ್ಷದ ಟೊಂಗೆ ಕಳೆದು ಕೇವಲ ಕಂಬವಾದಂತೆ ಯಕ್ಷಗಾನ ನಿರ್ವಾಣವಾಗಿ  ಇನ್ನು ಎನಿಲ್ಲ ಎಂಬ ಅಸಹಾಯಕತೆಯಲ್ಲಿ ಅಂಗಲಾಚುತ್ತದೆ. ಇನ್ನೂ ಏನಾದರೂ ಇದೆ ಎಂದು ಹೇಳಿದರೆ ಅದು ಕಸಿದು ತೇಗುವ ಮನೋಭಾವವಾಗುತ್ತದೆ. ಯಾಕೆಂದರೆ ಈಗಿನ ಮನೋವೃತ್ತಿ ಅದೇ ಬಗೆಯಲ್ಲಿದೆ.

        ದಶಕಗಳ ಹಿಂದೆ ಅಂದರೆ ಬಾಲ್ಯದಲ್ಲಿ ಕಾಣುತ್ತಿದ್ದ ಯಕ್ಷಗಾನ ಕ್ರಮೇಣ ಹಾದಿ ಪಲ್ಲಟಗೊಂಡಂತೆ ಸಂಗೀತ ಅಳವಡಿಕೆಯಾಯಿತು.  ಯಕ್ಷಗಾನದ ಕುಣಿತ ಅದು ಪರಿವರ್ತಿತ ನೃತ್ಯವಾಗಿ ಬದಲಾಗಿ ಯಕ್ಷಗಾನ ಕೇವಲ ಹೊರಾವರಣದಲ್ಲಿ ಉಳಿದು  ಅದರ ಒಳಗೆ ಇನ್ನೇನೋ ನುಸುಳುವುದಕ್ಕೆ ತೊಡಗಿತು.‌ ಆದರೆ ಏನೋ ಕಳೆದು ಹೋದ ಅನುಭವ.‌

        ಸಂಗೀತ ಯಕ್ಷಗಾನ ಕಲೆಯ ಆಸ್ವಾದನೆಯ ಹವ್ಯಾಸವಾದರೆ ಬೆವಣಿಗೆ ಒಂದು ರೀತಿಯ ಖಾಸಗೀ ಹವ್ಯಾಸ. ‌ಸಂಗೀತ ಹೀಗೆ ಕಿ‌ವಿಯಿಂದ ಹಾದು ಹೋದರೆ ಅದು ಗಾಢವಾದದ್ದು‌ ಮಿತ್ರ  ಸಿತ್ಲ ರಂಗನಾಥರ ಸಹವಾಸದಿಂದ, ಅದರಲ್ಲೂ ಶಾಸ್ತ್ರೀಯ ಸಂಗೀತ ಹೇಗೆ ಆಸ್ವಾದಿಸಬೇಕು ಎಂಬುದು ಇವರ ಸಹವಾಸದಲ್ಲಿ ಅರಿವಾಯಿತು. ರಾಗ ತಾಳ ಲಯದ ಬಗ್ಗೆ ಅದ್ಭುತ ಎನಿಸುವ ಮಾಹಿತಿ ಇವರಲ್ಲಿದೆ.

ಇಲ್ಲಿಂದ ನಂತರ  ಸಂಗೀತಾಸಕ್ತಿ ಹೊಸರೂಪ ತಳೆದರೆ, ಯಕ್ಷಗಾನ ಅದು ರಕ್ತಗತವಾಗಿ ಬಂದಂತೆ ಸಹಜ ಪ್ರೇಕ್ಷಕನಾದರೂ ಯಕ್ಷಗಾನ ಹೇಗೆ ಆಸ್ವಾದಿಸಬೇಕು ಅದು ಏನು ಎಂದು ಸ್ಥೂಲವಾಗಿ ಅರಿವು ಒದಗಿ ಬಂದದ್ದು ವಿದ್ವಾಂಸ  ಡಾ ಶ್ರೀ ರಾಘವ ನಂಬಿಯಾರರ ಸಂಪರ್ಕದಿಂದ. ಅದನ್ನು ಹೇಗೆ ಕಾಣಬೇಕು ಹೇಗೆ ಅನುಭವಿಸಬೇಕು ಎಂದು ಅರಿವಿಗೆ ಬಂತು. ಅದುವೆರೆಗೆ ಯಕ್ಷಗಾನದಲ್ಲಿ ಏನೋ ಕಳೆದುಕೊಂಡಿದ್ದೇವೆ ಎಂದು ಅನುಭವ ವೇದ್ಯವಾದರೂ ಅದು ಏನು ಎಂದು ತೋರಿಸಿಕೊಟ್ಟವರು ಇವರು.

        ಗುರು...ಜ್ಞಾನವನ್ನು ಎಲ್ಲಿದೆ ಎಂದು ತೋರಿಸಿದಂತೆ ಏನು ಕಳೆದು ಕೊಂಡಿದ್ದೇವೆ ಎಂದು ತೋರಿಸಿ ಕೊಡುವುದು ಸಹ ಗುರು ಸದೃಶ ಪ್ರಚೋದನೆಯಾಗುತ್ತದೆ. ಇದು ಪರಿಪೂರ್ಣವಲ್ಲ ಎಂಬುದು ಖಾತರಿಯಾಗುವಾಗ ನಂತರ ಅಲ್ಲಿ ಆಸಕ್ತಿ ಸಹಜವಾಗಿ ಇಳಿಮುಖವಾಗಿಬಿಡುತ್ತದೆ. 

ಯಕ್ಷಗಾನದಲ್ಲಿ ನನಗೆ ಇಷ್ಟವಾದವು ಎರಡು ಅಂಗ. ಒಂದು ಹಿಮ್ಮೇಳ, ಇನ್ನೊಂದು ಅರ್ಥಗಾರಿಕೆ.ಅದರಲ್ಲಿ ಅರ್ಥಗಾರಿಕೆ ಆಕರ್ಷಣೆಯನ್ನು ಕಳೆದುಕೊಂಡರೆ ಇನ್ನೊಂದು ಸಂಗೀತಮಯವಾಗಿ ಸತ್ವ ಹೀನವಾಗಿದೆ. ಸಂಗೀತ ಇಲ್ಲಿ ಅಸ್ವಾದಿಸುವುದಕ್ಕಿಂತ ಪರಿಶುದ್ಧ ಸಂಗೀತವನ್ನು ಮೂಲದಲ್ಲೇ ಅನುಭವಿಸಬಹುದು. 

        ಭಗ್ನ ವಾದದ್ದು ಹೇಗೆ ಆರಾಧನೆಗೆ ಅರ್ಹವಲ್ಲವೋ,ಹಾಗೇ ಒಡೆದ ಕನ್ನಡಿಯಲ್ಲಿ ಮುಖಬಿಂಬ ನೋಡಬಾರದು. ಹಾಗಾಗಿ ಅಪೂರ್ಣ ಎಂದು ಅರಿವಾದಾಗ ಮನಸ್ಸಿನ ಅತೃಪ್ತಿ ವೈರಾಗ್ಯ ರೂಪ ತಳೆದು ಬಿಡುತ್ತದೆ.  ಭಗ್ನವಾದದ್ದನ್ನು ಉಪಯೋಗಿಸುವುದೆಂದರೆ ಅದು ದಾರಿದ್ರ್ಯದ ಸಂಕೇತ. ಈಗಂತೂ ಅನಿವಾರ್ಯತೆ ಇಲ್ಲ. ಮುಂದೆ ಪರಿಪೂರ್ಣತೆಯಲ್ಲಿ ಅನುಭವಿಸುವ ಆಶಯ ಮಾತ್ರ ಸದ್ಯಕ್ಕೆ ಉಳಿದಿದೆ. ಈಗ ಯಕ್ಷಗಾನ ಪ್ರೇಕ್ಷಕನ ಮಟ್ಟಿಗೆ ಅನಿವಾರ್ಯ ಸಂಗತಿಯಲ್ಲ ಎಂಬುದು ಸತ್ಯ.   ಯಕ್ಷಗಾನ ಈಗ ವಿಷಾದ ದರ್ಶನವಾಗುತ್ತದೆ. 


Monday, November 13, 2023

ಹೀಗೊಂದು ನಿಟ್ಟುಸಿರು


    
    ಬಲಿಪ್ಪರ ಬಗ್ಗೆ ಹೇಳುವುದಕ್ಕೆ ನಾವುಗಳು ಎಷ್ಟು ಅರ್ಹರೋ ಎಂದು ಪ್ರತಿ ಸಲವೂ ಅನಿಸುತ್ತದೆ. ಆದರೆ ಅವರ ಮೇಲಿಟ್ಟ ಅಭಿಮಾನ ಹಕ್ಕು ಸ್ಥಾಪಿಸಿಬಿಡುತ್ತದೆ. ಹಲವು ನೆನಪುಗಳನ್ನು ಕಟ್ಟಿಕೊಟ್ಟ ಮಹಾವ್ಯಕ್ತಿತ್ವ. ಎಂಭತ್ತು ವರ್ಷವಾದರೂ ಅವರು ಮಗುವಿನಂತೆ ಜಗತ್ತನ್ನು ದಿಗ್ಭ್ರಮೆಯಿಂದ ನೋಡುತ್ತಿದ್ದರು.  ನಮ್ಮ ಮನೆಗೆ ಬಂದಿದ್ದರು. ಆಗ ಸಣ್ಣ ಮಕ್ಕಳಂತೆ ಡಿಸ್ಕವರ್ ಚಾನಲ್ ಹಾಕಿಸಿ ನೋಡುತ್ತಿದ್ದರು. ಕಾರ್ಟೂನು ಕೂಡ ನೋಡುತ್ತಿದ್ದರು. ಜತೆಗೆ ಆಗ ಪುಟ್ಟಮಕ್ಕಳಾಗಿದ್ದ ನನ್ನ ತಮ್ಮನ ಮಕ್ಕಳು ಇರುತ್ತಿದ್ದರು. ಅವರಲ್ಲಿ ಅವರು ಮಾತನಾಡುವುದನ್ನು ಕೇಳಬೇಕು. ಗೊಗ್ಗರು ಧ್ವನಿಯಲ್ಲಿ, ಅದು ಯಾಕೆ ಹಾಗೆ ಇದು ಯಾಕೆ ಹೀಗೆ ....ಮಕ್ಕಳೂ ನಗುತ್ತಾ ಅವರೊಂದಿಗೆ ಬೆರೆತದ್ದು ಛೇ ವಯೋ ವೃದ್ಧ ಹೀಗೆಯೂ ಬೆರೆಯಬಹುದೇ. ವೃದ್ದರಾಗುವಾಗ ಒಂದು ಅಹಂಭಾವ ಇರುತ್ತದೆ. ಯಾಕೆಂದರೆ ನಾನೇ ಅದಕ್ಕೆ ಸಾಕ್ಷಿ. ಅದರೆ ಅದೊಂದು ಇಲ್ಲದ ವ್ಯಕ್ತಿತ್ವ. 

        ಯೋಗಾಭ್ಯಾಸದಲ್ಲಿ ಒಂದು ವಿಷಯ ತಿಳಿದು ಬರುತ್ತದೆ. ಯೋಗಿಯಾದವನು ಯಾರನ್ನೂ ವಿರೋಧಿಸುವುದಿಲ್ಲ. ಮಾತ್ರವಲ್ಲ ಯೋಗಿನ್ನು ಕಂಡರೆ ಯಾರೂ ಭಯ ಪಡುವುದೂ ಇಲ್ಲ. ಬಲಿಪ್ಪರು ಈ ವರ್ಗಕ್ಕೆ ಸೇರಿದವರು. ಹಾಗಾಗಿಯೇ ಅವರು ಅಷ್ಟು ಮುಗ್ಧರಾಗಿ ಸಾಧುವಾಗಿ ಬದುಕುವುದಕ್ಕೆ ಸಾಧ್ಯವಾಯಿತು. 

        ನಮ್ಮ ಮನೆಗೆ ಬಂದವರಿಗೆ ಒಂದು ಕೋಟು ಚಳಿಗೆ ಧರಿಸುವುದಕ್ಕೆ ಕೊಳ್ಳುವ ಮನಸ್ಸಾಯಿತು. ಸರಿ ನಾನು ಕಾರಿನಲ್ಲಿ ಮಲ್ಲೇಶ್ವರಂ ಕರೆದುಕೊಂಡು ಹೋದೆ.  ಒಂದು ಖಾದೀ ಭವನದ  ಅಂಗಡಿಯಲ್ಲಿ ಅವರೇ ಹೋಗಿ ಖರೀದಿಸಿದರು. ಅದನ್ನು ಆನಂತರ ಪ್ರತೀ ಕಾರ್ಯಕ್ರಮಗಳಲ್ಲಿ ಹೊರಗೆ ಹೋದಾಗ ಧರಿಸುವುದನ್ನು ಕಂಡಿರಬಹುದು. ಅದು ನನ್ನೆದುರೇ ಖರೀದಿಸಿದ ಕೋಟು. ಹಾಗೆ ಖರೀದಿಸಿ ಹೊರಬರುವಾಗ ನನಗೂ ಏನಾದರೂ ಬೇಕಾ ಎಂದು ಕೇಳಿದ್ದರು. ....ಹಾಗೆ ಬರಬೇಕಾದರೆ  ಚೆಡ್ವಾಂಕ ಕೆಶೆಲ್ಲಿ ಕಂಕಣ್ಣುನ್ನ. ಕರಾಡಭಾಷೆಯಲ್ಲೇ ನಾವು ಮಾತನಾಡುತ್ತಿದ್ದದ್ದು. ಮಕ್ಕಳಿಗೆ ಏನಾದರು ತೆಗೆದುಕೊಳ್ಳಬೇಕು. ಹೌದು ಅವರ ಮನೆ ಎಂದರೆ ಸಣ್ಣ ಶಾಲೆ ಇದ್ದ ಹಾಗೆ ಮೊಮ್ಮಕ್ಕಳು. ಸರಿ ಒಂದು ಬೇಕರಿ ಎದುರು ಕಾರ್ ನಿಲ್ಲಿಸಿದೆ ಅವರ ಮಗನೂ ಇದ್ದರು. ಬಹುಶಃ ಶಶಿ ಆಗಿರಬೇಕು. ಒಂದು ದೊಡ್ಡ ತೊಟ್ಟೆ...ಐದು ಕಿಲೋ ಅಕ್ಕಿ ಹಿಡಿಯುವಂತಹ ದೊಡ್ಡ ತೊಟ್ಟೆ ಅದರಲ್ಲಿ ತುಂಬ ಬಿಸ್ಕತ್ತು ಸಿಹಿತಿಂಡಿ ಏನೇನೋ...ಅವರ ಮೊಮ್ಮಕ್ಕಳಿಗೆ ಹೀಗೊಂದು ಅಜ್ಜ ಸಿಕ್ಕಿದ್ದಾರಲ್ಲ ಎಂಬ ಭಾವನೆ.  ಸರಿ ಮನೆಯಲ್ಲಿ ರಾತ್ರಿ ಊಟ ಮಾಡಿ ಅವರು ಹೊರಡುವಾಗ ಕೊಂಡು ತಂದ ಅಷ್ಟೂ ತಿಂಡಿಯ ತೊಟ್ಟೆ ನಮ್ಮ ಪುಟ್ಟ ಮಕಳ ಕೈಯಲ್ಲಿಟ್ಟು ನಿನಗೆ ಆಯ್ತಾ ಎಂದು ಹೇಳುವಾಗ ದಿಗ್ಭ್ರಮೆ ಗೊಂಡವನು ನಾನು. ಅದೇ ಮಗಳು ಈಗ ಕಾಲೇಜು ಹುಡುಗಿ. ಮೊನ್ನೆ ಬಲಿಪ್ಪರು ಅಗಲಿದಾಗ ನಾನು ಉತ್ತರ ಭಾರತ ಪ್ರವಾಸದಲ್ಲಿ ಅಲಹಾಬಾದ್ನ ಪ್ರಯಾಗದಲ್ಲಿದ್ದೆ. ಆದಿನ ರಾತ್ರಿ ಫೇಸ್ ಬುಕ್ ಅಲ್ಲ ಟಿವಿಯಲ್ಲಿ ಬಲಿಪ್ಪರ ನಿಧನದ ಸುದ್ದಿ ನೋಡಿ ಮುಂಜಾನೆ ಐದು ಘಂಟೆ ಮಗಳು ಫೋನ್ ಮಾಡಿದ್ದಳು. ದೊಡ್ಡಪ್ಪಾ ನಿಮಗೆ ತುಂಬ ನೋವಾಗಿರಬೇಕಲ್ಲ. ನನಗೆ ಕಣ್ಣೀರು ಬರ್ತ ಉಂಟು. ನಾನು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಎಲ್ಲಿಯ ನಮ್ಮ ಹೆಣ್ಣುಮಗಳು? ಎಲ್ಲಿಯ ಬಲಿಪ್ಪಜ್ಜ?  ಮರುದಿನ ವಾರಣಾಶಿ ತಲುಪಿದ್ದೆ. ಇಲ್ಲಿಂದ ಕಾಶಿ ಯಾತ್ರೆ ಹೊರಡುವಾಗ ನಮಗೆ ಶ್ರೀಂಗೇರಿ ಜಗದ್ಗುರುಗಳು ಒಂದು ಆಶೀರ್ವಚನ ಸಂದೇಶ ಕಳುಹಿಸಿದ್ದರು. ಪಿತೃಗಳಿಗೆ ತರ್ಪಣ ಬಿಡಲು ಅಸಾಧ್ಯವಾಗಿದ್ದವರು, ಗಂಗೆಯಲ್ಲಿ ಮುಳುಗಿ ಮೂರು ಸಲ ಅವರನ್ನು ಸ್ಮರಿಸಿ ತರ್ಪಣ ಬಿಡಿ. ಅದು ಧಾರಾಳವಾಗಿ ಸಾಕಾಗುತ್ತದೆ. ಪಿತೃ ಆತ್ಮಕ್ಕೆ ಶಾಂತಿ ಲಭ್ಯವಾಗುತ್ತದೆ. ನಾನು ನನ್ನ ಅಪ್ಪನಿಗೆ ತರ್ಪಣ ಬಿಟ್ಟು ನಂತರ ಬಲಿಪ್ಪರನ್ನು ಸ್ಮರಿಸಿ ಅವರಿಗೂ ತರ್ಪಣ ಬಿಟ್ಟು ಬಿಟ್ಟೆ. 

        ನಾವು ನಮ್ಮ ಬಗ್ಗೆ ಹಲವು ದೂರುಗಳನ್ನು ನಿಂದನೆಯನ್ನು ಕೇಳಿರಬಹುದು. ಅಥವಾ ಇನ್ನೇಲ್ಲೋ ಯಾರೋ ನಮ್ಮ ಬಗ್ಗೆ ನಿಂದನೆ ಹೇಳಿರಬಹುದು. ಬೈದಿರಬಹುದು. ಆದರೆ ಯಾರಾದರೂ ಬಲಿಪ್ಪರ ಬಗ್ಗೆ ವೈಯಕ್ತಿಕವಾಗಿ ನಿಂದನೆಯ ಮಾತು ಹೇಳಿದ ಉದಾಹರಣೆ ಸಿಗಲಾರದು. ಇದೊಂದು ಸಂಗತಿ ಸಾಕು ಅವರ ವ್ಯಕ್ತಿತ್ವಕ್ಕೆ. 

        ಅವರ ಬಗ್ಗೆ ಹೇಳುವಾಗ ನಮ್ಮ ಬೆಂಗಳೂರಿನ ಸನ್ಮಾನ ಕಾರ್ಯಕ್ರಮ  ನಮ್ಮ ಮಟ್ಟಿಗೆ ಅದು ದೊಡ್ಡದು ನಮ್ಮ ಎಲ್ಲ ಮಿತ್ರರಿಗೂ ಅದು ಗೊತ್ತಿದೆ. ಅವರ ಮೇಲಿನ ಗೌರವ ಅಭಿಮಾನಕ್ಕೆ ಅವರು ಸಹಿ ಹಾಕಿ ಅಂಗೀಕಾರ ಒತ್ತಿದ್ದರು. ಯಾಕೆಂದರೆ ನಾವು ಮರೆಯದಿರುವುದು ಬಿಡಿ, ಆದರೆ ಅವರೆಂದೂ ಮರೆಯಲಿಲ್ಲ, ಅದು ನಾನು ಅವರನ್ನು ಭೇಟಿಯಾಗುವಾಗಲೆಲ್ಲ ಅವರ ಕಣ್ಣು ಸಾರಿ ಹೇಳುತ್ತಿತ್ತು. ಒಂದು ಸಣ್ಣ ಸೇವೆಗೂ ಕೃತಜ್ಞತೆ ಸಲ್ಲಿಸುವ ದೊಡ್ಡ ಹೃದಯ ಅವರದು. 

        ಒಂದೆರಡು ಸಲ ಅವರ ಮನೆಗೆ ಹೋಗಿದ್ದೆ. ಅದು ಭಾಗವತರ ಮನೆ ಎಂದು ಅನಿಸಲಿಲ್ಲ. ನಮ್ಮ ಅತ್ಮೀಯ ಬಂಧುವೊಬ್ಬರ ಮನೆ ಅಂತ ಅನಿಸಿತ್ತು. ಪಾಯಸದ ಊಟ ಅಕ್ಕರೆಯಲ್ಲಿ ಹಾಕಿ, ಅವರ ಜತೆ ಕುಳಿತು ತಾಂಬೂಲ ಸವಿದ ನೆನಪು, ಹೋಗಲಿ ಹೊರಡುವಾಗ ಮನೆಯಲ್ಲೇ ಆದ ಎರಡು ಸೌತೆ ಮತ್ತೇನೋ ತರಕಾರಿ ತಂದು ಕೈಗೆ ಇತ್ತರು. ಅಲ್ಲಿ ಕ್ರಯ ಕೊಡ್ಬೇಡ್ವೋ ತೆಕ್ಕೊಂಡು ಹೋಗು.... ಆ ತರಕಾರಿ ತಿಂದು ಎಲ್ಲಿ ಹೋಯಿತೋ...ಆದರೆ ಆ ನೆನಪು ಇಂದಿಗೂ ತರಕಾರಿಯಂತೆ ಹಸಿರಾಗಿ ಇದೆ. 

        ಬಲಿಪ್ಪಜ್ಜ ಕುಳಿತಲ್ಲಿ ನಿಂತಲ್ಲಿ .....ಯಕ್ಷಗಾನದ ಜಪ ಮಾಡುವವರು. ಅವರಿದ್ದಲ್ಲಿ ಯಕ್ಷಗಾನದ ತನು ಗಂಧ ಹರಡದೇ ಇರುವುದಕ್ಕೆ ಸಾಧ್ಯವಿಲ್ಲ. ಅವರ ಅಸ್ತಿತ್ವದಲ್ಲಿ ಪರಂಪರೆಯ  ಶಕ್ತಿ ಇದೆ. ಅವರ ಅಗಲಿಕೆ ಯಕ್ಷಗಾನದಲ್ಲಿ ಒಂದು ಶೂನ್ಯವನ್ನು ಸುತ್ತಿದೆ ಸತ್ಯ. ಇಂದು ಆ ಶೂನ್ಯತೆಯ ಅರಿವಿನ ಪ್ರಜ್ಞೆ ಉಂಟಾಗಿ ಜಾಗೃತವಾಗಬೇಕು. ಅದು ಅವರಿಗೆ ಸಲ್ಲಿಸುವ ದೊಡ್ಡ ಗೌರವ. ಅವರೂ ದೂರಾದರೂ....ನನಗೂ ಈಗ ಯಕ್ಷಗಾನಕ್ಕೆ ಹತ್ತಿರವಾಗುವುದಕ್ಕೆ ಯಾವ ಕಾರಣವೂ ಸಿಗುತ್ತಿಲ್ಲ. ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರವಿಷ್ಟೆ....ಮನಸ್ಸು ಬಲಿಪ್ಪರನ್ನು ಮತ್ತಷ್ಟು ನೆನಪಿಸುತ್ತದೆ. ಆ ಶೂನ್ಯ ಅದು ಶೂನ್ಯವಾಗಿ ಮತ್ತಷ್ಟು ವ್ಯಾಪಿಸಿದ ಅನುಭವವಾಗುತ್ತದೆ. 

Tuesday, October 24, 2023

ಮಾರ್ನೆಮಿ ವೇಷವೂ ಯಕ್ಷಗಾನವೂ..

 ಮಾರ್ನೆಮಿ ವೇಷವೂ ಯಕ್ಷಗಾನವೂ..

            ಮಾರ್ನೆಮಿ(ಮಹಾನವಮಿ)ಗೆ ಯಕ್ಷಗಾನದ ವೇಷಹಾಕಿದವನ ವೇಷ ಕಳಚಿದ ವಿಷಯ ಓದಿ ಒಂದಷ್ಟು ಅನಿಸಿಕೆಗಳು ಬೇಡವೆಂದರೂ ನುಸುಳಿಬಿಟ್ಟಿತು. ವ್ಯಾಧಿಗೆ ಬರೇ ಲೇಪನ ಮಾತ್ರ ಸಾಧ್ಯವಿಲ್ಲ. ಆಂತರಿಕ ಚಿಕಿತ್ಸೆ ಅನಿವಾರ್ಯತೆ ಇದೆ. ಆದರೆ ಅದನ್ನು ಅರ್ಥವಿಸುವ ಮನೋಭಾವ ಎಂದೋ ನಶಿಸಿ ಹೋಗಿದೆ. ಈಗ ಕೇವಲ ಹೊರಾವರಣವನ್ನು ಸ್ವಚ್ಛಗೊಳಿಸುವುದನ್ನು ಮಾಡಿ ಒಂದಷ್ಟು ಬದ್ದತೆಯನ್ನು ತೋರಿಸುವುದಷ್ಟೇ ಕಾಣುತ್ತದೆ. 

        ಊರಿಗೆ ನವರಾತ್ರಿ ಸಮಯದಲ್ಲಿ ಹೋಗುವಾಗಲೆಲ್ಲ ಕಣ್ಣಿಗೆ ಮೊದಲು ಬೀಳುವುದು ಬಗೆ ಬಗೆಯ ವೇಷಗಳು.  ಬಾಲ್ಯದಲ್ಲಿ ಹೀಗೆ ವೇಷಗಳು ಮನೆ ಮನೆಗೆ ಬರುವಾಗ ಖುಷಿಯಾಗುತ್ತಿತ್ತು. ಎಲ್ಲ ಮನೆಗೆ ಬಂದು ನಮ್ಮ ಮನೆಗೆ ಬಾರದೇ ಇದ್ದರೆ ಯಾಕೋ ನಮಗೆ ಏನೋ ಕಳೆದುಕೊಂಡ ಅನುಭವವಾಗುತ್ತಿತ್ತು. ಹಲವು ಸಲ ನಾವು ಬಡವರಾಗಿದ್ದುದರಿಂದಲೋ ಏನೋ, ಮನೆಗೆ ಬಂದರೂ ನಾವು ಸಾಕಷ್ಟು ಕೊಡಲಾಗದವರು ಎಂಬ ಭಾವನೆಯಿಂದಲೋ ಏನೋ ಗೊತ್ತಿಲ್ಲ, ವೇಷಗಳು ಹಾಗಿಂದ ಹಾಗೇ ಹೋಗುತ್ತಿದ್ದವು. ಆದರೆ ಮೊನ್ನೆ ನವರಾತ್ರಿಗೆ ಊರಿಗೆ ಹೋದಾಗ ಈ ವೇಷಗಳನ್ನು ಕಂಡಾಗ ಅವರು ಮನೆ ಮನೆಗೆ ಹೋಗಿ ಕುಣಿಯುವುದನ್ನು ಕಾಣುವಾಗ ಇದೊಂದು ಅನಿಷ್ಟ ಅಂತ ಭಾವನೆ ಬಂದು ಬಿಟ್ಟಿತು. ಅದರಲ್ಲಿ ಹುಲಿ ಕರಡಿ ವೇಷಗಳು ಒಂದು ಜಾನಪದೀಯ ಗಂಭೀರತೆ, ಮತ್ತು ಸಾಕಷ್ಟು ಪರಿಶ್ರಮ ಅಭ್ಯಾಸಗಳಿಂದ ಕೂಡಿ ಒಂದು ಸಾಂಸ್ಕೃತಿಕ ಪ್ರತಿನಿಧಿತ್ವ ತೊರಿಸಿದರೆ ಮಿಕ್ಕುಳಿದಂತೆ ವೇಷಗಳನ್ನು ಕಾಣುವಾಗ ಇದೊಂದು ಅನಿಷ್ಟ ಸಂಪ್ರದಾಯದಂತೆ ಭಾಸವಾಯಿತು. ಮೊದಲೆಲ್ಲ ಇದಕ್ಕಾಗಿ ಹರಕೆ ಹೊತ್ತು ಒಂಭತ್ತು ದಿನ ವೇಷ ಹಾಕಿ ಸುತ್ತಾಡಿ ಭಿಕ್ಷಾಟನೆ ಮಾಡಿ ತಂದ ಭಿಕ್ಷೆಯನ್ನು ಊರ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸಿ ವೇಷಕಳಚಿ ಮಾಡಿದ ಪಾಪವನ್ನು ಕಳಚಿದಂತೆ ಪರಿಶುದ್ದರಾಗುತ್ತಿದ್ದರು. ಆ ಭಾವನೆ ಒಂದು ಪಾವಿತ್ರ್ಯತೆಯನ್ನು ತೋರಿಸಿದರೆ ಇಂದು ಇದು ಒಂದು ರೀತಿಯ ದಂಧೆಯೋ ಇನ್ನೇನೋ ಆಗಿ ಹೋಗಿದೆ. ಸುಡುವ ಬಿಸಿಲಿಗೆ ಆ ವೇಷಗಳನ್ನು ತೊಟ್ಟು ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವುದು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ. ಮೊದಲು ಹರಕೆ ರೂಪದಲ್ಲಿ ಮೊದಲು ಹರಕೆ ರೂಪದಲ್ಲಿ ಕಪ್ಪು ಮಸಿಯನ್ನು ಬಳಿದು ಒಂದು ಜಾತಿ ಸೂಚಕದ  ವೇಷವನ್ನು ತೊಟ್ಟು ತಿರುಗುವವರನ್ನು ಕಂಡಿದ್ದೆ. ರಾತ್ರಿ ಇವುಗಳನ್ನು ಕಂಡು ಭಯಭೀತರಾಗುತ್ತಿದ್ದೆವು. ಆನಂತರ ಸರಕಾರ ಅದನ್ನು ಸೂಕ್ತವಾಗಿ ನಿಷೇಧಿಸಿತ್ತು. ನನ್ನ ಅಭಿಪ್ರಾಯದಲ್ಲಿ ಉಳಿದವುಗಳನ್ನೂ (ಹುಲಿವೇಷವನ್ನು ಹೊರತುಪಡಿಸಿ) ನಿಷೇಧಿಸಿಬಿಡಬೇಕು. ಅದರಲ್ಲೂ ಆರಾಧಿಸುವ   ದೇವರ ವೇಷಗಳನ್ನು ರಾಮ ಈಶ್ವರ ಹನುಮಂತ ಹೀಗೆ ಹಾಕುವುದು ಮಾತ್ರವಲ್ಲ ಮದ್ಯಸೇವಿಸಿ ನಶೆಯಲ್ಲಿ ಅಸಭ್ಯತನವನ್ನು ಪ್ರದರ್ಶಿಸಿ ಎಲ್ಲೋ ಕುಡಿದು ಓಲಾಡುವುದನ್ನು ಕಾಣುವಾಗ ಇವೆಲ್ಲ ಒಂದು ಕೆಟ್ಟ ಸಂಸ್ಕೃತಿಯನ್ನು ತೋರಿಸಿದಂತೆ ಭಾಸವಾಗುತ್ತದೆ. ಈ ಶುದ್ದಿಕರಣ ಕೇವಲ ಯಕ್ಷಗಾನಕ್ಕೆ ಸಂಭಂಧಿಸಿ ಸೀಮಿತಗೊಂಡರೆ ಸಾಲದು. ಕರಾವಳಿಯ ಸಂಸ್ಕೃತಿಗೆ ರೋಗಬಾಧೆಯಂತಿರುವ ಇವುಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಬೇಕು.  ಮೊದಲು ಅದಕ್ಕೊಂದು ದೈವೀ ಭಾವನೆ ಹರಕೆಯ ರೂಪವಿತ್ತು. ಈಗ ಅದು ಇದೆ ಎಂದು ಅನಿಸುವುದಿಲ್ಲ. ಹಲವು ಕಡೆ ಇದು ಇನ್ನಿಲ್ಲದ ಅವಾಂತರಗಳಿಗೆ ಅಹಿತಕರ ಕೃತ್ಯಗಳಿಗೆ ಪ್ರಚೋದನೆ ಕೊಡುತ್ತದೆ. 

        ನವರಾತ್ರಿ ವೇಷಗಳು ಆರಾಧನೆಯ ರೂಪದಲ್ಲಿರಬೇಕು. ಅದಕ್ಕಾಗಿ ಅದು ಇನಷ್ಟು ಸಾಂಕೇತಿಕವಾಗಿ ಆಚರಿಸುವಂತಾದರೆ ಒಂದು ಶುದ್ದ ಸಂಸ್ಕೃತಿಯ ರಕ್ಷಣೆಯಾಗುತ್ತದೆ. ಸಾಂಕೇತಿಕವಾಗಿ ವೇಷತೊಟ್ಟು ಅಲ್ಲಿ ಇಲ್ಲಿ ಅಂಡಲೆಯದೆ ನೇರ ದೇವಸ್ಥಾನಕ್ಕೆ ಹೋಗಿ ಹರಕೆ ಸಲ್ಲಿಸಿ ಶುಭ್ರರಾದರೆ ಅದು ದಿವ್ಯ ಅನುಭವದ ಜತೆಗೆ ಒಂದು ಸಭ್ಯತೆಯನ್ನೂ ಶಿಸ್ತನ್ನೂ ಕಾಪಾಡಿದಂತಾಗುತ್ತದೆ. 

            ಈಗೀಗ ಸಾಮಾನ್ಯವಾಗಿ ಯಕ್ಷಗಾನದವೇಷಗಳನ್ನು ತೊಟ್ಟು ಓಡಾಡುವುದು ಯಥೇಚ್ಛವಾಗಿ ಕಣ್ಣಿಗೆ ಬೀಳುತ್ತದೆ. ಇನ್ನು ಕಂಠ ಮಟ್ಟ ಕುಡಿದು ಸಿಕ್ಕ ಸಿಕ್ಕ ಹಾಗೆ ವೇಷವನ್ನು ತೊಟ್ಟು ತಿರುಗಾಡಿ ಎಲ್ಲೆಂದರಲ್ಲಿ ಬೀಳುವುದು ಜನರಿಗೆ ಅಂಗಲಾಚಿ ತೊಂದರೆಯನ್ನು ಕೊಡುವಾಗ ಅಸಹ್ಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಯಕ್ಷಗಾನ ಅದಕ್ಕೋಂದು ಮೌಲ್ಯವಿದೆ ಅದು ಯಕ್ಷಗಾನದ ವಲಯದಲ್ಲೇ ಕಳೆದು ಹೋಗುವುದು ನಿಜಕ್ಕೂ ಅಸಹನೀಯ.  ಯಕ್ಷಗಾನದ ಬಗ್ಗೆ ಹೇಳುವಾಗ ಇನ್ನೂ ಒಂದೆರಡು ಅನಿಸಿಕೆಗಳು ಮತ್ತಷ್ಟೂ ಹೇಳಬೇಕೆನಿಸುತ್ತದೆ. ಮುಖ್ಯವಾಗಿ ಬೀದಿಯಲ್ಲಿ ಯಾರೋ ಒಬ್ಬನ ವೇಷ ಕಳಚಿ ಔಷಧಿ ಹಚ್ಚಿದರೆ ಯಾವ ಕ್ರಾಂತಿಯೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ರಂಗಸ್ಥಳದಲ್ಲೇ ಯಕ್ಷಗಾನ ಮೌಲ್ಯಗಳು ಕಳೆದು ಇನ್ನೇನು ಕಳೆಯುವುದಕ್ಕೆ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಇಂದು ಯಕ್ಷಗಾನವಿದೆ. ಯಕ್ಷಗಾನ ಮುಖ್ಯವಾಗಿ ಆಂತರಿಕ ವ್ಯಾಧಿಯಿಂದ ತತ್ತರಿಸುತ್ತದೆ. ಇನ್ನು ಇವುಗಳೆಲ್ಲ ಹೊರಗಿಂದ ಹಚ್ಚುವ ಮುಲಾಮು ಆದೀತೇ ಹೊರತು ಒಳಗೆ ಬ್ರಹತ್ತಾಗಿ ಬೆಳೆದ  ವೃಣ ವಾಸಿಯಾಗುವುದಕ್ಕೆ ಸಾಧ್ಯವಿಲ್ಲ.  ಮೊದಲು ರಂಗಸ್ಥಳದಲ್ಲಿ ಆಗುವ ಆಭಾಸಗಳನ್ನು ನಿಲ್ಲಿಸಬೇಕು. ರಂಗಸ್ಥಳದ ಅಸಹ್ಯ ವೇಷಗಳನ್ನು ಕಳಚುವ ಮಹತ್ಕಾರ್ಯವನ್ನು ಮಾಡಬೇಕು. ವಿಪರ್ಯಾಸವೆಂದರೆ ಅದಕ್ಕೆ ಯಾವ ಕಲಾವಿದರೂ ಧ್ವನಿ ಎತ್ತುವುದಿಲ್ಲ. ಹೀಗೆ ರಸ್ತೆಯ ಬದಿಯ ಬಡಪಾಯಿ ಮೇಲೆ ಧಾಳಿ ಮಾಡಿ ಒಂದಷ್ಟು ಹೆಸರನ್ನು ಗಳಿಸಬಹುದು. ಅದರಿಂದ ಯಕ್ಷಗಾನಕ್ಕೆ ಕಳೆದು ಹೋದ ಗೌರವ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಮುಖ್ಯವಾಗಿ ಹೀಗೆ ಯಕ್ಷಗಾನದ ವೇಷ ಹಾದಿ ಬೀದಿಯಲ್ಲಿ ಓಡಾ(ಲಾ)ಡುತ್ತಿರುವುದಕ್ಕೆ ಮೂಲತಃ ಯಕ್ಷಗಾನದ ಕಲಾವಿದರೂ ಇಲ್ಲ ಅದಕ್ಕೆ ಸಂಭಂಧಿಸಿದವರೇ ಕಾರಣರಾಗಿರುತ್ತಾರೆ. ಯಕ್ಷಗಾನದ ಗಾಂಭೀರ್ಯತೆಯನ್ನು ಗೌರವವನ್ನು ಸ್ವತಃ ಯಕ್ಷಗಾನ ಕಲಾವಿದರೆ ಮಾರಾಟಕ್ಕೆ ಇಟ್ಟರೆ ಅದರ ಬಗ್ಗೆ ಉಳಿದವರಿಗೆ ಭಯ ಭಕ್ತಿ ಗೌರವ ಹೇಗೆ ಪ್ರಚೋದನೆ ಗೊಳ್ಳಬಹುದು? ರಂಗದಲ್ಲಿ ಕಲಾವಿದರು ಕಳೆದು ಬೀಸಾಕಿದ್ದನ್ನು ಈವರು ಬೀದಿಯಲ್ಲಿ ತೊಟ್ಟು ಕಳೆಯುತ್ತಾರೆ. ನಿಜಕ್ಕಾದರೆ ಈಗ ಎರಡೂ ಕಡೆಯಲ್ಲಿ ಆಗುವುದು ಒಂದೇ. 

            ಯಕ್ಷಗಾನದ ಬಗ್ಗೆ ಒಂದಷ್ಟು ಕಾಳಜಿ ಇದ್ದರೆ ಈ ಶುದ್ದೀಕರಣ ಆಂತರಿಕವಾಗಿ ರಂಗಸ್ಥಳದಿಂದಲೇ ಆರಂಭವಾಗಲೀ ಪರಂಪರೆಯನ್ನು ನಾಶ ಮಾಡಿದವರಿಗೆ ಈ ಗಂಭೀರತೆ ಅರಿವಾಗುವುದಕ್ಕೆ ಸಾಧ್ಯವಿಲ್ಲ. ಹಿಮ್ಮೇಳ ಮುಮ್ಮೇಳ ವನ್ನು ಕುಲಗೆಡಿಸಿ ಸಮಗ್ರ ಯಕ್ಷಗಾನವೇ ವೇಷ ಬದಲಿಸಿ ವಿರೂಪವಾಗಿ ಹೋಗಿದೆ. ಮೊದಲು ಹೊರಗಿನ ಗಾಯಾಕ್ಕೆ ಔಷಧಿ ಹಚ್ಚುವ ಬದಲು ಒಳಗಿನ ವ್ಯಾಧಿಗೆ ಚಿಕಿತ್ಸೆಯಾಗಬೇಕು. ಯಕ್ಷಗಾನಕ್ಕೆ ಭಕ್ತಿ ಗೌರವ ಸಲ್ಲಿಸುವಂತೆ ಯಕ್ಷಗಾನರಂಗವೇ ಬದ್ದತೆಯನ್ನು ತೋರಿಸಬೇಕು. ಇಲ್ಲವಾದರೇ ಹೀಗೆ ಯಕ್ಷಗಾನದ ಘನತೆ ಬೀದಿಯಲ್ಲಿ ಚಿಲ್ಲರೆ ದುಡ್ಡಿಗೆ ಮಾರಾಟವಾಗಿಬಿಡುತ್ತದೆ.

                ಈ ಲೇಖನ ಪೋಟೋ ಹಾಕಬೇಕೆಂದು ಯೋಚಿಸಿದ್ದೆ ಆದರೆ ತೆಗೆದ ಫೋಟೋಗಳು ಅಸಹ್ಯ ವೆನಿಸಿ ಅದನ್ನು ಹಾಕುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದೆ ಅನ್ನಿಸಿತ್ತು. 


Sunday, July 23, 2023

ಯಕ್ಷಗಾನದಲ್ಲಿ ಹೊಟ್ಟೆ ಪಾಡು

ಕದ್ದ ಕಳ್ಳ ಸಿಕ್ಕಿ ಬೀಳುತ್ತಾನೆ. ಆತ ಕದಿಯಬೇಕಾದ ಕಾರಣ ತಿಳಿದಾಗ ಹೊಟ್ಟೆ ಪಾಡು ಎಂದು ಮರುಕ ಹುಟ್ಟುತ್ತದೆ. ಕರುಣೆ ಮರುಕ ಆರ್ತತೆ ಇವುಗಳೆಲ್ಲ ಹಲವು ಸಲ ಮಾನವೀಯ ಮೌಲ್ಯಗಳ ತುಲನೆಯನ್ನು ಮಾಡುತ್ತವೆ. ಪಾಪ ಕಳ್ಳ ಹೊಟ್ಟೆ ಪಾಡಿಗೆ ಕದ್ದಿದ್ದಾನೆ ಎಂದುಕೊಂಡು ಮಾಲಿಕ ಕರುಣೆಯಿಂದ  ಹೊಟ್ಟೆಗೆ  ಒಂದಷ್ಟು ಆಹಾರವನ್ನು ನೀಡಿ ಕ್ಷಮಿಸಿ ಬಿಟ್ಟು ಬಿಡುತ್ತಾನೆ. ದೂರು ಕೊಟ್ಟು ಶಿಕ್ಷಿಸುವುದು ಇರಲಿ, ಮೇಲೊಂದಿಷ್ಟು ಆಹಾರನೀಡುವ ಔದಾರ್ಯ ತೋರಿ ಮಾನವೀಯ ಮೌಲ್ಯವನ್ನು ಸಾರುತ್ತಾನೆ. ಅಲ್ಲಿ ಹೊಟ್ಟೆ ಪಾಡು ಎಂಬುದು ನಮ್ಮ ಅಂತಃ ಕರಣದ ಸಂವೇದನೆ. 

ಹೊಟ್ಟೆಪಾಡಿನ ಹಸಿವೆ ಎಲ್ಲ ಅಪರಾಧನವನ್ನು ಕ್ಷಮಿಸುವಂತೆ ಮಾಡುತ್ತದೆ. ದಾಸವರೇಣ್ಯರು ಹೇಳಿದಂತೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಎಲ್ಲವೂ ಹೊಟ್ಟೆಗಾಗಿ. ಅನಿವಾರ್ಯತೆಯ ಅಂಕೆಯೊಳಗೆ ಯಾವುದೂ ಅಪರಾಧವಾಗುವುದಿಲ್ಲ. ಹಲವು ಸಲ ಜೀವಭಯಕ್ಕಿಂತಲೂ ಹಸಿವಿನ ತುಡಿತ ಹೆಚ್ಚಾಗಿರುತ್ತದೆ. ಹಸಿವಾಗಬೇಕು ನಂತರ ಹಸಿವು ಶಮನವಾಗಬೇಕು. ಇದು ಲೋಕದ ಜೀವನಚಕ್ರದ ಸಂಕೇತ. 

ಒಂದು ಯಕ್ಷಗಾನದ ವೀಡಿಯೋ ತುಣುಕು, ಆನಂತರ ಅದರ ಬಗೆಗಿನ ಅಭಿಪ್ರಾಯಗಳು ನನ್ನಲ್ಲಿ ಹಸಿವಿನ ಚಿಂತನೆಯನ್ನು ಉಂಟುಮಾಡಿತು. ಮನುಷ್ಯನ ಎಲ್ಲ ಪ್ರವೃತ್ತಿಗಳೂ ಹೊಟ್ಟೆ ಹಸಿವಿನ ಕಾರಣಗಳನ್ನೇ ನೀಡುತ್ತದೆ. ಕೆಲವು ಸಮಯಗಳ ಹಿಂದೆ ನಾವೊಂದಷ್ಟು ಸಮಾನ ಚಿಂತನೆಯ ಮಿತ್ರರು ಪರಸ್ಪರ ಯಕ್ಷಗಾನದ  ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೆವು.   ನಾವು ಕೆಲವರಂತೂ ಅದನ್ನು ಜಾಲತಾಣದಲ್ಲಿ ವ್ಯಕ್ತ ಪಡಿಸುತ್ತಾ ಇದ್ದೆವು. ತಿಳಿದದ್ದು ತಿಳಿಯದೇ ಇದ್ದದ್ದು ಮತ್ತೆ ತಿಳಿಯಬೇಕಾದದ್ದು ಹೀಗೆ  ವೈವಿಧ್ಯಮಯ ಅನಿಸಿಕೆಗಳ ಹಂಚಿಕೆಯಾಗುತ್ತಿದ್ದವು. ಆವಾಗ ಎಲ್ಲ ಪ್ರಶ್ನೆಗಳಿಗೂ  ಅವಸಾನದ ಒಂದು ಉತ್ತರ ಇರುತ್ತಿತ್ತು. ಅದೇ ಹೊಟ್ಟೆ ಪಾಡು. ದಕ್ಕು ನಿಷ್ಠೂರವಾಗಿ ನಾವು ಸಮರ್ಥನೆಗಳನ್ನು ಕೊಡಬಹುದಿತ್ತು.  ಅದರೆ ನಮಗೇಕೆ  ಎಂದುಕೊಂಡು ಔದಾಸಿನ್ಯವನ್ನು ತಾಳಿಕೊಂಡದ್ದೇ ಹೆಚ್ಚು. ಆದರೆ ಈಗ ಹೊಟ್ಟೆ ಪಾಡು  ಎಂದು ಅನಿವಾರ್ಯವಾಗಿ  ನಾವು ಸಮರ್ಥಿಸುವಂತಾಗುತ್ತದೆ. 

ಯಕ್ಷಗಾನದ ವಿಚಾರಗಳ ಬಗ್ಗೆ ಈಗ ಆಸಕ್ತಿ ಕುಂಠಿತವಾಗಿದೆ. ಹಲವು ಹಿರಿಯ ಕಲಾವಿದರ ಅನುಪಸ್ಥಿತಿ, ಹಲವರ ಅಗಲಿಕ ಒಂದು ಕಾರಣವಾದರೆ ಯಕ್ಷಗಾನ ಸತ್ವ ಹೀನವಾಗುತ್ತದೆ. ಹಲವು ನವ ವಿನ್ಯಾಸದ ಉಡುಪುಗಳನ್ನು ಧರಿಸಿ ನಾವು ನಮ್ಮ ಮೂಲ ಸ್ವರೂಪವನ್ನು ಹೇಗೆ ಮರೆಮಾಚುತ್ತೇವೋ ಯಥಾ ರೀತಿ ಯಕ್ಷಗಾನವೂ ಅದೇ ಸ್ಥತಿಯನ್ನು ಎದುರಿಸುತ್ತಿದೆ. ಹಲವು ಸಲ ಅಸಲಿಗೆ ಮೂಲ ರೂಪ ಇದಲ್ಲ ಎಂದು ನಾವುಗಳು ಕಂಡ ಅನುಭ ಹೇಳುತ್ತಿದ್ದೆವು. ಆಗ ಬರತ್ತಿದ್ದ ಸಾಮಾನ್ಯ ಉತ್ತರವೆಂದರೆ  ಹಸಿವು....ಹೊಟ್ಟೆಪಾಡು. ಒಂದು ಪ್ರದರ್ಶನದ ಬಗ್ಗೆ ಅಥವಾ ಒಬ್ಬ ಕಲಾವಿದನ ಬಗ್ಗೆ ಸಾರ್ವಜನಿಕವಾಗಿ ಹೀಗಲ್ಲ ಅಂತ ಹೇಳಿದರೆ ಅದಕ್ಕೆ ನಿಷ್ಠೂರವಾದ ಆಕ್ಷೇಪಗಳು ಎದುರಾಗುತ್ತಿದ್ದವು. ಸಾರ್ವಜನಿಕವಾಗಿ ಅಭಿಪ್ರಾಯ ಹೇಳಿದರೆ ಇದು ಸರಿಯಲ್ಲ ಎಂದು ಹೇಳಿದರೆ ಹೊಟ್ಟೆಗೆ ಹೊಡೆಯುತ್ತಾರೆ ಎಂಬ ಸಮರ್ಥನೆಗಳು ಎದುರಾಗುತ್ತಿದ್ದವು. ನಮ್ಮ ದಾರಿದ್ರ್ಯ ಹೇಗಿರುತ್ತದೆ ಎಂದು ಅಚ್ಚರಿಯಾಗುತ್ತದೆ. ಸರಿಯಲ್ಲದೇ ಇದ್ದದ್ದನ್ನೂ ಒಪ್ಪಬೇಕಾಗುತ್ತದೆ. ಕಳ್ಳತನವೂ ಇನ್ನು ಏನೇನೋ ಅದು ಹೊಟ್ಟೆ ಹಸಿವಿನ ಎದುರು ಸಕ್ರಮವಾಗುತ್ತದೆ. ವಿಪರ್ಯಾಸವೆಂದರೆ ಇತ್ತೀಚೆಗೆ ಚಿಕ್ಕಮೇಳದ ಬಗೆಗೆ ಹರಿದು ಬರುವ ವಿಮರ್ಶೆಗಳಿಗೆ ಈ ಹಸಿವು ಹೊಟ್ಟೆಪಾಡಿನ ಮಾನದಂಡವೇ ಇರಲಿಲ್ಲ. ಹಿರಿಯ ಕಲಾವಿದರನ್ನು ಅವರ ರಂಗದ ಮೇಲಿನ ವ್ಯವಹಾರವನ್ನು ಒಂದು ಸಲ ನಮ್ಮವರೊಬ್ಬರು ವಿಮರ್ಶಿಸಿದರು. ಇದು ಸರಿಯಲ್ಲ.  ಹೌದು ಸರಿಯಲ್ಲ ...ಎಂಬುದು ಸರಿ ಆದರೆ ಅದನ್ನು ಖಾಸಗಿಯಾಗಿ ವೈಯಕ್ತಿಕವಾಗಿ ವ್ಯಕ್ತ ಪಡಿಸಬೇಕು. ಯಾಕೆಂದರೆ ಒಂದು ತೇಜೋವಧೆ...ಇನ್ನೊಂದು ಹೊಟ್ಟೆಪಾಡು. ಆಟದಲ್ಲಿ ನಿತ್ಯ ಸಿಗುವ ಸಂಬಳ ಒಂದು, ಆನಂತರ ಬಿಡುವಿಲ್ಲದ ಕಾರ್ಯಕ್ರಮದ ಸಂಭಾವನೆ ಬೇರೆ...ಬಡತನದ ಹಸಿವು ಬಾಧೆಯಾಗದೆ ಉಳಿದೀತೆ?  ಇಷ್ಟೆಲ್ಲ ಚಿಂತನೆಗಳು ಆ ಚಿಕ್ಕ ಮೇಳದ ಬಡಪಾಯಿಗಳಿಗೆ ಅನ್ವಯವಾಗುವುದಿಲ್ಲ. ಈಗ ಅವರಿಗೂ ಒಂದು ನಿಯಮ ನಿಬಂಧನೆಗಳು ರೂಪಿತವಾಗುತ್ತದೆ. ಇದುವರೆಗೆ ಸಮಗ್ರ ಯಕ್ಷಗಾನಕ್ಕೆ ಅನಿವಾರ್ಯವಿಲ್ಲದ ನಿಯಮ ನಿಬಂಧನೆಗಳ ಆವಶ್ಯಕತೆ ಈಗ ಉಂಟಾಗಿದೆ. ಹೋಗಲಿ ಸಮಗ್ರ ಯಕ್ಷಗಾನದ ಬಗ್ಗೆ ಒಂದು ಗಂಭೀರವಾದ ಚಿಂತನೆ ಅದಕ್ಕೊಂದು ಕಟ್ಟು ನಿಟ್ಟಿನ ನಿಯಮ ಸಾಧ್ಯವಾಗಬಹುದೇ?  ಹೊಟ್ಟೆಪಾಡಿನ ಸಮಸ್ಯೆ ಇಲ್ಲಿ ಅಡ್ಡಬರುತ್ತದೆ. ಯಾಕೆಂದರೆ ಐವತ್ತರ ದಶಕದಲ್ಲಿ ಯಕ್ಷಗಾನ ಪುನರ್ನಿರ್ಮಾಣಗಿ ಸಂಸ್ಕರಿಸಲ್ಪಡುವಾಗ ಅಲ್ಲಿಯೂ ನಿಯಮಗಳು ವಿಧಿಸಲ್ಪಟ್ಟಿದ್ದವು. ಬಹುಶಃ ಅದರ ಬಗ್ಗೆ ಗಂಭೀರತೆ, ಆಗಿನ ಹಿರಿಯರ ಪರಿಶ್ರಮದ ಬಗ್ಗೆ ಒಂದಷ್ಟು ಗೌರವ ಇದ್ದರೆ ಈಗ ಚಿಕ್ಕ ಮೇಳಕ್ಕೆ ನಿಯಮ ಮಾಡುವ ಅನಿವಾರ್ಯತೆ ಒದಗಿ ಬರುತ್ತಿರಲಿಲ್ಲ. ಹಳೆಯ ನಿಯಮಗಳು ಬಹಳಷ್ಟು ಇವೆ. ಕಲವೆಲ್ಲ ಓದದೇ ಗೆದ್ದಲು ಹಿಡಿದಿರಬಹುದು. ಲವು ಓದಿ ಇದೆಲ್ಲ ಅಗಲಕ್ಕಿಲ್ಲ, ಅದಕ್ಕೆಲ್ಲ ಅರ್ಥವಿಲ್ಲ ಎಂದು ಬದಿಗೆ ಸರಿಸಿ ಈಗ ತುಕ್ಕು ಹಿಡಿದಿರಬಹುದು.

  ಮುಖ್ಯವಾಗಿ ನಮ್ಮ ಎಲ್ಲ ಸಮಸ್ಯೆಗೂ ಶಿಕ್ಷಣದ ಅಭಾವವೇ ಮುಖ್ಯ ಕಾರಣವಾಗುತ್ತದೆ. ಈಗಂತೂ ಶಿಕ್ಷಣದ ಸಂಪನ್ಮೂಲಗಳು ಬಹುತೇಕ ನಾಶವಾಗಿದೆ. ಹಿರಿಯ ಕಲಾವಿದರು ಅಗಲಿದರೆ, ಇನ್ನು ಕೆಲವರು ಭೀಷ್ಮನಂತೆ ಶರಶಯ್ಯೆಗೆ ಸರಿಸಲ್ಪಟ್ಟು ಅವರ ಉಪದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಒಂದಿಷ್ಟು ಯಕ್ಷಗಾನದಲ್ಲಿ ಹೆಜ್ಜೆಗಳನ್ನು ಇಡುವಾಗ ಅವರಿಗೆ ಜಗತ್ತಿಗೆ ಯಕ್ಷಗಾನವನ್ನು ಕಲಿಸುವ ಬಯಕೆ ಹುಟ್ಟಿಕೊಳ್ಳುತ್ತದೆ. ತಮ್ಮ ಮಹಾನ್ ಜ್ಞಾನವನ್ನು ಜಗತ್ತಿಗೆ ಸಾರುವ ತವಕ. ಗುರು ಎಂದರೆ ಅಂತ್ಯಂತ ಶ್ರೇಷ್ಠ.ಸರ್ವ ಗುರು ತತ್ವವನ್ನೂ ರಂಗದಲ್ಲಿ ಸಾರುವ ನಮ್ಮ ರಂಗ ಪರಂಪರೆಯಲ್ಲಿ ಗುರುವಿನ ಸ್ಥಿತಿ ಹೇಗಾಗಿದೆ ಎಂದರೆ...ತಾನು ಇಂಥವನ ಶಿಷ್ಯ ಎಂದು ಹೇಳಿ, ನಿರೀಕ್ಷೆಯನ್ನು ಹುಟ್ಟಿಸಿ ಒಂದಷ್ಟು ಲಾಭವನ್ನು ಮಾಡುವುದಕ್ಕಷ್ಟೇ ಸೀಮಿತ. ಗುರು  ಉಪದೇಶ ಏನು? ಆ ಉಪದೇಶ ಎಷ್ಟು ಪಾಲಿಸಲಾಗುತ್ತದೆ? ಇದೆಲ್ಲವೂ ಗೌಣ. ಈಗೀಗ ಗುರು ಸ್ಥಾನವೂ ಭ್ರಷ್ಟವಾದಂತೆ, ಒಂದಷ್ಟು ಕಲಿತಕೂಡಲೇ ಅದನ್ನು ಯಾರಿಗೆ ಉಪದೇಶ ಮಾಡಿ ಗುರುವಾಗಬಹುದು ಎಂಬುದು  ಆವರಿಗೆ ಮೊದಲು ಹುಟ್ಟುವ ಬಯಕೆ. ಗುರುವಿಗೆ ತಿಳಿಯದೇ ಇರುವುದು ಮಾತ್ರವಲ್ಲ ಇನ್ನೇನೋ ಉಪದೇಶವಾಗಿ ಯಕ್ಷಗಾನ ಎಂಬುದು ಮೂಲದಲ್ಲೇ ಒಸರು ಮಲಿನವಾಗುತ್ತದೆ. ಈಗ ಒಂದೊಂದು ರೂಪದಲ್ಲಿ ಪರಂಪರೆ ಸೃಷ್ಟಿಯಾಗುತ್ತದೆ.  ಇಲ್ಲಿಯೂ ಹಲವು ಸಲ ಮೂಲ ಕಾರಣವಾಗುವುದು ಅದೇ ಹೊಟ್ಟೆ ಪಾಡು. ಆದರೆ ಒಂದು ಹಸಿವಿನ ಸಂಪೂರ್ಣ ಅರಿವಾಗಬೇಕಾದರೆ ಅದನ್ನು ಅನುಭವಿಸಿ ತಿಳಿದಿರಬೇಕು. ಯಕ್ಷಗಾನವೂ ಅದೇ ರೀತಿ ಅದು ಸಂಪೂರ್ಣವಾಗಿ ಅರಿವಿಗೆ ಬರಬೇಕು. ಆದರೆ ಆ ಅನುಭವ ಮಾತ್ರ ಈಗ ಇರುವುದಿಲ್ಲ.

ಹಸಿವು ಏನು ಎಂದು ಹೇಳಬೇಕಾದರೆ ಅದರ ಅನುಭವ ಇರಬೇಕು. ಹುಟ್ಟಿದ ಪ್ರತೀ ಪ್ರಾಣಿಗೂ ಇದರ ಅನುಭವ ಮೊದಲಿಗೆ ಆಗುತ್ತದೆ. ಆದರೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಇಲ್ಲದಾಗ ನಿಜವಾಅ ಹಸಿವಿನ ಅನುಭವವಾಗುತದೆ. ಪುರಾಣದಲ್ಲೂ ವಿಶ್ವಾ ಮಿತ್ರ ನಾಯಿ ಮಾಂಸ ತಿಂದ ಕಥೆ ಇದೆ. ಅದು ಎಷ್ಟು ಸತ್ಯವೋ ಸುಳ್ಳೋ ಒತ್ತಟ್ಟಿಗಿರಲಿ. ಆದರೆ ಹಸಿವು ಎಲ್ಲದಕ್ಕೂ ಉತ್ತರವಾಗಿ ನಿಲ್ಲುತ್ತದೆ.  ಹಸಿವಿನ ಬಗ್ಗೆ ಹೇಳುವುದಕ್ಕೆ  ಹಸಿವಿನ ಅನುಭವ ಹೇಗೆ ಇರಬೇಕೋ, ಹಸಿವಿನ ಅನುಭವದಂತೆ ಯಕ್ಷಗಾನದ ಬಗ್ಗೆ ಹೇಳುವುದಕ್ಕೂ ಅದರ ಅನುಭವ ಇರಲೇ ಬೇಕು. ಈಗ ಯಕ್ಷಗಾನ ಕೇಳುವಾಗ ನೋಡುವಾಗ ನಿಜವಾದ ಯಕ್ಷಾನುಭವ ಸಾಧ್ಯವಾಗುವುದಿಲ್ಲ.  ಹಸಿವು ಹಸಿವಾಗಿಯೇ ಊಳಿಯುತ್ತದೆ. ಇದರ ನಡುವೆ ಯಾವುದೋ  ಒಂದು ಹಸಿವು ಶಮನವಾಗುತ್ತಿದ್ದರೆ ಅದನ್ನು ಹೊಟ್ಟೆ ಪಾಡು ಎಂದು ಸುಮ್ಮನಾಗುವುದೊಂದೇ ಉಳಿದುಕೊಂಡಿದೆ.

ಯಕ್ಷಗಾನ  ಮೂಲ ರೂಪದ  ವೃಕ್ಷ ಎಂದೋ ಮರೆಯಾಗಿದೆ. ಅದರ ಬಿಳಲುಗಳು ಬೇರುಗಳು ಅದಕ್ಕೆ ಚಿಗುರಿದ  ಚಿಗುರುಗಳು ಯಾವುದೋ ರೂಪದಲ್ಲಿ ಗೋಚರವಾಗುತ್ತಿದೆ. ಎಲ್ಲರೂ ಭ್ರಮಾಧೀನರಾಗಿ ಇದುವೇ ಪುರಾತನ ಮರ ಎಂದುಕೊಂಡು ಅದನ್ನೇ ನೋಡುತ್ತಾ ನಿಂತಿದ್ದಾರೆ. 

 

 

.

 


Monday, March 13, 2023

ಪವಡಿಸಿದ ಭೀಷ್ಮ



  ಮಹಾಭಾರತದಲ್ಲಿ ಭೀಷ್ಮನ ಕಥೆ ಯಾರಿಗೆ ತಿಳಿದಿಲ್ಲ? ಒಂದು ಬಗೆಯಲ್ಲಿ ಮಹಾಭಾರತದ ಕಥಾನಾಯಕ ಇವನೇ  ಆದಿಯಿಂದ ಅಂತ್ಯದವರೆಗೆ ವಿಜ್ರಂಭಿಸುವ ವ್ಯಕ್ತಿತ್ವ. ತನಗಾಗಿ ಎನೂ ಮಾಡದೆ ಚಂದ್ರವಂಶದ ಸಕಲ ಉತ್ಕರ್ಷಕ್ಜೂ ಚಿಂತಿಸುತ್ತಾ ಬಹು ದೀರ್ಘ ಜೀವನವನ್ನು  ಅದಕ್ಕಾಗಿ ಮೀಸಲಿಡುತ್ತಾನೆ. ಬಲು ದೀರ್ಘವಾದ ಜೀವನ ಯಾನ ಆತನಿಗೆ ಸದಾಪರೀಕ್ಷೆಯನ್ನು ತಂದರೂ ತನ್ನದೇ ಆದ ತಾತ್ವಿಕ ಹಾದಿಯನ್ನೇ ನಂಬಿ ಅದಲ್ಲದೇ ಬೇರೆ ಏನೂ ಇಲ್ಲ ಎಂಬಂತೆ ಬದುಕುತ್ತಾನೆ. ಬದುಕು ಆತನಿಗೆ ವಾಸ್ತವದ ಸತ್ಯ ಪರೀಕ್ಷೆಯನ್ನು ಒಡ್ಡಿದರೆ ಈತ ಅಚಲನಾದ. ಯಾರಿಗಾಗಿ ದುಡಿದ? ಯಾಕಾಗಿ ದುಡಿದ? ಅದರಲ್ಲಿ ಏನು ಪಡೆದ?  ತನ್ನದು ಎಂಬ ವ್ಯಕ್ತಿತ್ವ, ಯಾರೂ ಅಳೆಯಲಾಗದ ಅಖಂಡ ವ್ಯಕ್ತಿತ್ವ.  ತನ್ನವರಿಂದಲೇ ಟೀಕೆಗಳು ಎದುರಾದರೂ ಅದು ಸ್ತುತಿವಾಚಕದಂತೆ ಸ್ವೀಕರಿಸಿದ. ಬದುಕು ಆತನಿಗೆ ಕಲಿಸಿದಷ್ಟೂ ಬದುಕಿಗೆ ಆತ ಕಲಿಸಿದ. ಹೊಗಳುವವರನ್ನು ಹತ್ತಿರ ಕರೆಯಲಿಲ್ಲ. ಆಕ್ಷೇಪಿಸುವವರನ್ನು ದೂರ ತಳ್ಳಲಿಲ್ಲ. ಒಂದು ಅರ್ಥದಲ್ಲಿ ಸ್ಥಿತಪ್ರಜ್ಜತೆ.  ಹಾಭಾರತವನ್ನು ಸಮಗ್ರ  ಅವಲೋಕನ‌ಮಾಡಿದರೆ ಭೀಷ್ಮ‌ದೈತ್ಯಾಕಾರದಲ್ಲಿ ಭೀಷ್ಮನಾಗಿ ಮರೆದ.

  ಯಕ್ಷಗಾನದಲ್ಲಿ  ಹಿರಿಯ ಅಜ್ಜ ಬಲಿಪರು ಭೀಷ್ಮನ ವ್ಯಕ್ತಿತ್ವ ತೋರಿದರೂ ಭೀಷ್ಮನಾಗಿ ಮರೆದದ್ದು ಮಾತ್ರ ಕಿರಿಯ ಬಲಿಪ್ಪರು. ಭಾರತದ ಭೀಷ್ಮರಂತೆ ಯಾರನ್ನೂ ಹತ್ತಿರಕ್ಕೆ ಕರೆಯದ ಯಾರನ್ನೂ ದೂರಕ್ಕೆ ತಳ್ಳದ ಬಲಿಪ್ಪರ ಸ್ಥಿತ ಪ್ರಜ್ಞೆ,  ಅದು ಅವರಿಗೆ ಮಾತ್ರವೇ ಸಲ್ಲುವ ನಿಲುವಾಗಿತ್ತು. ಅಜ್ನನೂ ಭೀಷ್ಮ ಮೊಮ್ಮಗನೂ ಭೀಷ್ಮ. ಒಂದರ್ಥದಲ್ಲಿ ಭಾಗವತ ವಂಶವೇ ಬೀಷ್ಮ ಸಾಕ್ಷಾತ್ಕಾರಕ್ಕೆ ಕಟಿ ಬದ್ದವಾದಂತೆ. ಯಕ್ಷಗಾನಕ್ಕೆ ಅನಿವಾರ್ಯವಾದ ಭೀಷ್ಮ ಪದವಿ.

ಬಲಿಪ ನಾರಾಯಣ ಭಾಗವತರು...ಈ ಹೆಸರು ಎರಡೂ ಪೀಳಿಗೆಗೆ ಸಾಮ್ಯತೆಯಲ್ಲಿ ಯಾಕೆ ಒದಗಿಬಂತು ಎಂಬುದೇ ಅಚ್ಚರಿ. ಅಜ್ಜ ಎಳೆದ ಯಕ್ಷಗಾನ ಪರಂಪರೆಯ ಆ ರೇಖೆ ಮೊಮ್ಮಗನ ತನಕವೂ  ಬಂದು ರೇಖೆ  ಮತ್ತೂ‌ಬೆಳೆದು ಲಂಬಿಸಿತು. ಈ ರೇಖೆಯೇ ಯಕ್ಷಗಾನದ ಬೆನ್ನೆಲುಬಾಗಿ ಬೆಳೆದದ್ದು ಇತಿಹಾಸ. ನಮ್ಮ ಹಿರಿಯರು ಯಕ್ಷಗಾನವನ್ನು ಅಜ್ಜ ಬಲಿಪರಿಂದ ಕಂಡರೆ ನಾವು  ಕಿರಿಯ  ಬಲಿಪರಿಂದ ಕಂಡೆವು. ಅಷ್ಟಕ್ಕೇ ನಿಲ್ಲದೆ ಅದು ಇಂದಿನ ತಲೆಮಾರಿನವರೆಗೂ ಮುಂದುವರಿದು, ಇದೀಗ ಕೊನೆಗೊಂಡಿತು. ವ್ಯವಹಾರದಲ್ಲಿ ಹಾಕಿದ ಬಂಡವಾಳ ಪುನಹ ಕೈ ಸೇರುವುದಿಲ್ಲ . ಕೇವಲ ಲಾಭ ಮಾತ್ರ ಕೈ ಸೇರಬಹುದು. ಬಂಡವಾಳ ಕೈ ಸೇರಿದರೆ ವ್ಯವಹಾರ ನಿಂತಂತೆ. ಲಾಭದ ನಿರೀಕ್ಷೆ ಮಾತ್ರ ಇರಬೇಕು. ಭರವಸೆ ಕಲ್ಪಿಸುವಂತಿಲ್ಲ. ವ್ಯವಹಾರ ಎಂದಾಗ ಇದೆಲ್ಲ ಸಾಮಾನ್ಯ. ಯಕ್ಷಗಾನದಲ್ಲಿ ಹಾಕಿದ ಬಂಡವಾಳ ಹಿಂದೆ ತೆಗೆಯುವಂತಹ ಒಂದು ಸಂಕ್ರಮಣ ಸ್ಥಿತಿ. ಆದರೆ ಬಲಿಪ್ಪರು ಹಾಕಿದ ಭಂಡವಾಳ ಅದು ಇಂದಿಗೂ ಸ್ಥಿರವಾಗಿ ಇದೆ. ಅದು ವ್ಯವಹಾರಕ್ಕೆ ಬಳಸಿಕೊಳ್ಳುವಲ್ಲಿ ಯಕ್ಷಗಾನದ ಅಳಿವು ಉಳಿವು ನಿರ್ಧರಿಸಿದೆ. ಯಾಕೆಂದರೆ ಬಲಿಪ್ಪರು ತುಳಿದ ಹಾದಿ ಅದು ಯಕ್ಷಗಾನದ ಹಾದಿ. ಆ ಹಾದಿ ಯಕ್ಷಗಾನ್ದ ಪರಂಪರೆಯ ಹಾದಿ. 

ಮಹಾಭಾರತದಲ್ಲಿ ಎಲ್ಲವೂ ಮುಗಿದ ಮೇಲೆ. ಧರ್ಮರಾಯ ಭೀಷ್ಮರ ಬಳಿಗೆ ಬರುತ್ತಾನೆ. ಭೀಷ್ಮರು ಯಾರು ಕೊಡದೆ ಇದ್ದ ಉಪದೇಶಗಳನ್ನು ಪಡೆಯುತ್ತಾನೆ. ಆದರೆ ಯಕ್ಷಗಾನದಲ್ಲಿ ಅದು ಎಷ್ಟು ಮಟ್ಟಿಗೆ ಸಂಭವಿಸಿದೆ ಎಂದರೆ ಆತಂಕವಾಗುತ್ತದೆ. ಕೊನೆಯ ತನಕವು ಯಕ್ಷಭೀಷ್ಮನಿಗೆ ಇದ್ದ ಚಿಂತೆ ಅದೊಂದೆ. ತನ್ನ ಮಗ ಇನ್ನಿಲ್ಲ ಎಂದಾಗ ಅವರು ಹೇಳಿಕೊಂಡ ಮನದಾಳದ ಮಾತು,  " ನನಗೆ ಗೊತ್ತಿರುವುದೆಲ್ಲಾ ಅವನಿಗೆ ಗೊತ್ತುಂಟು. ಆದರೆ ಈಗ ಅವನೇ ಇಲ್ಲ......" ಅವರ ಯಕ್ಷಗಾನದ  ಕಾಳಜಿಗೆ ಸಾಕ್ಷ್ಯವನ್ನು ನೀಡುತ್ತದೆ. ಯಕ್ಷಗಾನದಲ್ಲಿ ಯುಧಿಷ್ಠಿರನ ಸ್ಥಾನ ಇನ್ನು ಬರಿದಾಗಿಯೇ ಇದೆ ಎಂದು ಹಲವರ ಅನಿಸಿಕೆ. ಸಾಮಾನ್ಯವಾಗಿ ಶ್ರೇಷ್ಠವ್ಯಕ್ತಿಗಳು ಗತಿಸಿ ಹೋದಾಗ ಹೇಳುವ ಸಾಮಾನ್ಯ ಮತೊಂದು ಉಂಟು....ತುಂಬಲಾರದ ನಷ್ಟ. ಹಲವು ಸಲ ಇದರ ಅಂತರಾರ್ಥ ಏನೇ ಆಗಿರಲಿ,  ಬಲಿಪ್ಪರ ಅಗಲಿಕೆ ಈ ಮಾತಿಗೆ ಅತ್ಯಂತ ಹೆಚ್ಚು ಪುಷ್ಟಿಯನ್ನು ಕೊಡುತ್ತದೆ. ಯಾಕೆಂದರೆ ಅವರು ಬದುಕಿದ ಬದುಕು, ಸವೆಸಿದ ಹಾದಿ ಮಾಡಿದ ಸಾಧನೆ ಇದಕ್ಕೆ ಕಾರಣ. ಅವರು ಬದುಕಿದಾಗ ಬದುಕಿನ ಬಗ್ಗೆ ಯೊಚಿಸಲಿಲ್ಲ. ಸವೆಸಿದ ಹಾದಿಯಲ್ಲಿ ಹಿಂದೆ ತಿರುಗಿ ನೋಡಲಿಲ್ಲ.  ಸಾಧಿಸಿದಾಗ ಆ ಸಾಧನೆಯನ್ನು ಲೆಕ್ಕ ಹಾಕಲಿಲ್ಲ.  ಇದೆಲ್ಲವನ್ನು ಪರಿಪೂರ್ಣವಾಗಿ ನೋಡಿದ ಪ್ರೇಕ್ಷಕನೂ ಇಲ್ಲ ಎಂಬುದು ದೌರ್ಭಾಗ್ಯ. 

ಬಲಿಪ್ಪರಿಗೆ ಏನೆಲ್ಲ ಗೊತ್ತುಂಟು? ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭ ಇಲ್ಲ. ಅದನ್ನು ಅವುಗಳನ್ನು ಅವಲೋಕಿಸಿದರೆ ಅಚ್ಚರಿಯಾಗುತ್ತದೆ. ಇಂತಹ ಪ್ರಯತ್ನ ನಡೆದಾಗಲೆಲ್ಲ ಅದ್ಭುತವನ್ನೇ ತೆರೆದಿಡುವುದು ಬಲಿಪ್ಪರ ಜ್ಞಾನ ಸಂಪತ್ತು ಹೇಳುತ್ತದೆ. ಅವರು ಎಂದಿಗೂ ತನಗೆ ಗೊತ್ತುಂಟು ಎಂದು ತೋರಿಸಿದವರಲ್ಲ. ಆದರೆ ಯಕ್ಷಗಾನ ಅದನ್ನು ತೋರಿಸುತ್ತಾ ಸಾಗಿತು.ಒಂದಿಷ್ಟು ತಿಳಿದರೆ ಬ್ರಹ್ಮಾಂಡವನ್ನೇ ತಿಳಿದವರಂತೆ ವರ್ತಿಸುವವರು ಇರುವಾಗ ಬಲಿಪ್ಪರ ಜ್ಞಾನ ಸದಾ ಎಲೆಯ ಮರೆಯಲ್ಲೇ ಹುದುಗಿರುತ್ತಿತ್ತು. ಯಕ್ಷಗಾನದಲ್ಲಿ ಅದು ಬಹಿರಂಗವಾದರೂ ಆದರೆ ಅದು ಪರಿಪೂರ್ಣ ಎಂದು ಅನಿಸುವುದಿಲ್ಲ.   ಯಾಕೆಂದರೆ ಅವರಿಗೆ ಗೊತ್ತಿರುವುದು ಏನು ಎಂದು ಅವರಿಗೆ ಮಾತ್ರ ಗೊತ್ತು. ತಿಳಿಯುವವರ ಉತ್ಸಾಹಕ್ಕೆ ಅದು ಸದಾ ಸವಾಲಾಗಿಯೆ ಎದುರು ನಿಲ್ಲುತ್ತಿತ್ತು. ಹಾಗಾಗಿ ಇಂದು ಮಹಾಭಾರತದ ಯುಧಿಷ್ಠಿರ ಯಾರು ಎಂದರೆ ಉತ್ತರಿಸುವುದಕ್ಕೆ ತಡಕಾಡಬೇಕಾಗುತ್ತದೆ. ತುಂಬಲಾರದ ನಷ್ಟ ಎಂದು ಹೇಳುವುದು ಸುಲಭ, ವಿಚಿತ್ರವೆಂದರೆ ನಷ್ಟದ ಅಂದಾಜು ಲೆಕ್ಕ ಹಾಕುವುದಕ್ಕೂ ಸಾಧ್ಯವಿಲ್ಲ ಅಷ್ಟನ್ನೂ ಕಳೆದುಕೊಂಡು ಬಿಟ್ಟಾಗಿದೆ. ಮೊದಲೇ ಎಲ್ಲವನ್ನು ಕಳೆದುಕೊಂಡ ಯಕ್ಷಗಾನ ಇಂದು ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡಿದೆ ಎನ್ನುವಾಗ ವಿಷಾದ ಆವರಿಸುತ್ತದೆ. 

ಬಲಿಪ್ಪರ ಜತೆಗಿನ ನೆನಪುಗಳು ಇಂದು ಅವರು ಇಲ್ಲ ಎನ್ನುವುದನ್ನು ನಂಬುವುದಕ್ಕೆ ಅಸಾಧ್ಯವೆನಿಸುವಂತ ಪ್ರಭಾವವನ್ನು ಮನಸ್ಸಿನಲ್ಲಿ ಉಂಟು ಮಾಡಿದೆ. ಹಾಗಾಗಿ ಮನಸ್ಸು ತುಡಿಯುತ್ತಾ ಇತ್ತು ಒಂದು ಸಲ ಹೋಗಿಬಿಡೋಣ ಎಂದು. ಆ ನೆನಪುಗಳು ನೆನಪುಗಳಾಗಿಯೇ ಇರಲಿ...ಬಲಿಪ್ಪರು ನಮ್ಮೊಂದಿಗೆ ಇದ್ದಾರೆ ಎಂಬ ವಿಶ್ವಾಸವನ್ನು ಅದು ತುಂಬಿಸುತ್ತದೆ. ಹೋದರೂ ಅಲ್ಲಿನ ನೆನಪುಗಳು ಇನ್ನಷ್ಟು ಕಾಡುವುದಕ್ಕಾರಂಭಿಸುತ್ತವೆ. ಅಗಲಿದ್ದಾರೆ ಎಂದು ತಿಳಿಯುವುದಕ್ಕಿಂತ ಇದ್ದಾರೆ ಎಂದು ನಂಬುವುದೇ ಹಿತವಾಗುತ್ತದೆ. 

ಯಕ್ಷಗಾನ, ಬಾಲ್ಯದಲ್ಲಿ ಬೆರಗು ಕಣ್ಣುಗಳಿಂದ ನೋಡುತ್ತಿದ್ದೆ. ಆಗೆಲ್ಲ ಈಗಿನಂತೆ ರಂಗ ಪಾರದರ್ಶಕವಾಗಿರಲಿಲ್ಲ. ರಂಗದಲ್ಲಿ ಏನು ಕಾಣುತ್ತಿದ್ದೆವೋ ಅದು ನಿಜವೇನೋ ಎಂಬ ಮುಗ್ಧತೆ. ಅಥವಾ ಅದು ಹೆಚ್ಚು ಮನಸ್ಸಿಗೆ ಪ್ರಭಾವ ಬೀರುತ್ತಿತ್ತು. ಆ ಸಮಯದಲ್ಲೇ ಬಲಿಪ್ಪರು ಯಕ್ಷಗಾನದ ಭಾಗವತರಾಗಿರುವುದನ್ನು ರಂಗದಲ್ಲಿ ಕಂಡಿದ್ದೆ. ಮಂಗಳೂರಿನ ದೇರೇಬೈಲಿನ ನಮ್ಮ ಮನೆ ಆಸು ಪಾಸಿನಲ್ಲಿ ಕಟೀಲು ಮೇಳದ ಆಟವಾದರೆ ಹಗಲು ಅವರು ನಮ್ಮ ಮನೆಗೆ  ವಿಶ್ರಾಂತಿಗೆ ಬರುತ್ತಿದ್ದರು. ಜತೆಯಲ್ಲಿ ಯಾರದರೊಬ್ಬ ಪುಟ್ಟ ಕಲಾವಿದರು ಇರುತ್ತಿದ್ದರು. ಬಲಿಪ್ಪರು ಹೆಚ್ಚು ಮಾತನಾಡುತ್ತಿರಲಿಲ್ಲ. ನಮ್ಮ ಹಿರಿಯರಲ್ಲಿ ತುಸು ಮಾತನಾಡುತ್ತಿದ್ದರು. ಅವರ ತಾಂಬೂಲ ಪೆಟ್ಟಿಗೆ ನಮಗಂತೂ ಸೋಜಿಗದ ವಿಷಯವಾಗಿತ್ತು. ಸಾಯಂಕಾಲ ಅದಕ್ಕೆ ಅಡಿಕೆ ಹೋಳು ಮಾಡಿ ಪೆಟ್ಟಿಗೆ ತುಂಬ ತುಂಬಿಸುತ್ತಿದ್ದರು.  ಆ ಪುಟ್ಟ ಪೆಟ್ಟಿಗೆಯಲ್ಲಿ ಅದಕ್ಕೆ ಅಂತ ಒಂದು ಭಾಗ ಇರುತ್ತಿತ್ತು.  ಆ ಸಮಯದಲ್ಲೇ ಯಕ್ಷಗಾನ ಎಂದರೆ ಬಲಿಪ್ಪರು ಬಲಿಪ್ಪರು ಎಂದರೆ ಯಕ್ಷಗಾನ ಇದು ಅಚ್ಚೊತ್ತಿ ಈಗಲೂ ಅದೇ ಭಾವ. ಬಲಿಪ್ಪರು ಎಲ್ಲಿರುತ್ತಾರೋ ಅಲ್ಲೊಂದು ಯಕ್ಷಗಾನದ ಕಂಪನ್ನು ಕಾಣುತ್ತಿದ್ದೆ.

ನೋಡು ನೋಡುತ್ತಿದ್ದಂತೆ ಯಕ್ಷಗಾನದಲ್ಲಿ ಹಲವು ಬದಲಾವಣೆಗೆಗಳು ಉಂಟಾಯಿತು. ಹಲವಾರು ಭಾಗವತರು ಬಂದರು. ಎಲ್ಲವೂ ಇಷ್ಟವಾದರೂ ಬಲಿಪ್ಪಜ್ಜನ ಪದ ಕೇಳುವಾಗ ಅದು ನೈಜ ಯಕ್ಷಗಾನ ಎಂಬಂತೆ ಭಾಸವಾಗತೊಡಗಿತ್ತು. ಅದೊಂದು ಕಾಲವಿತ್ತು. ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವುಡರ ಯುಗ. ಬಹುಶಃ ಯಕ್ಷಗಾನದಲ್ಲಿ ಅತ್ಯಂತ ದೊಡ್ಡ ಕ್ರಾಂತಿ. ಎಲ್ಲಿ ನೋಡಿದರೂ ಅದೇ ಧ್ವನಿ ಅಬ್ಬರಿಸುತ್ತಿತ್ತು. ಎಲ್ಲರೂ ಬದಲಾದರು ಬಲಿಪ್ಪರು ಮಾತ್ರ ಬದಲಾಗಲಿಲ್ಲ. ಪರಂಪರೆಯ ಯಕ್ಷಗಾನ ಅವರನ್ನು ಬಿಟ್ಟಿಲ್ಲವೋ ಇಲ್ಲ ಅವರು ಯಕ್ಷಗಾನವನ್ನು ಬಿಡದೆ ಕುಳಿತರೋ ಅಂತೂ ನಿಜವಾದ ಪರಂಪರೆ ಅಲ್ಲಿ ಉಳಿದು ಬಿಟ್ಟಿತು. ಪ್ರವಾಹ ಬಂದು ಊರಿನ ಗುಡಿ ಮುಳುಗಿಯೇ ಬಿಟ್ಟಿತು ಎನ್ನುವಾಗ ಪ್ರವಾಹದಲ್ಲಿ ಕೊಚ್ಚಿ ಹೋಗದೇ ಆ ಗುಡಿ ಮತ್ತೆ ಹೊರಜಗತ್ತನ್ನು ನೋಡುವಂತೆ ಬಲಿಪ್ಪರ ಕಂಠ ಮೊಳಗಾತೊಡಗಿತು. ದಶಕಗಳು ಕಳೆದರು ಬದಲಾಗದ ಮಾಸದ ಪರಂಪರೆಯ ಆವಶ್ಯಕತೆ ಯಕ್ಷಗಾನದಲ್ಲಿ ಕಂಡು ಬಂತು. ಯಕ್ಷಗಾನ ಬದಲಾಯಿತು, ಪ್ರೇಕ್ಷಕ ಬದಲಾದ ಬಲಿಪ್ಪರು ಮಾತ್ರ ಅಚಲವಾಗಿ ನಿಂತುಕೊಂಡಿದ್ದರು. ಅವರು ಪ್ರೇಕ್ಷಕರಿಗಾಗಿ ಹಾಡಲಿಲ್ಲ. ಯಕ್ಷಗಾನಕ್ಕಾಗಿ ಹಾಡಿದರು. ಕೋಗಿಲೆ ಯಾರು ಕೇಳಲಿ ಎಂದು ಹಾಡುವುದಿಲ್ಲ....ಅದು ಸ್ಫೂರ್ತಿಗೊಂಡು ಹಾಡುತ್ತದೆ. ಕೇಳಬೇಕಾದವನು ಮುಂಜಾನೆ ಎದ್ದು ಕಿವಿಗೊಡಬೇಕು. ಆಗಲೂ ಕೋಗಿಲೆ ಕಣ್ಣಿಗೆ ಕಾಣಿಸುವುದಿಲ್ಲ. ಯಕಃಶ್ಚಿತ್ ಬಲಿಪ್ಪರು ಕೋಗಿಲೆಯಂತೆ, ಅವರೆಂದೂ ಎದುರಿಗೆ ಕಾಣಿಸಿಕೊಳ್ಳದ ಅದೃಶ್ಯ ಮೂರ್ತಿಯಾದರು.  ಅವಗಣನೆ ಅವರಿಗೆ ಅವಗಣನೆ ಎಂದೆನಿಸಲಿಲ್ಲ. ಪುರಸ್ಕಾರದ ಹಿಂದೆ ಅವರೆಂದೂ ಸರದಿ ನಿಲ್ಲಲಿಲ್ಲ. ದೇವರಿಗೊಬ್ಬರಿಗೆ ಅಥವಾ ಕಲಾ ಸರಸ್ವತಿಗೆ  ನಮಸ್ಕರಿಸಿದ್ದು ಬಿಟ್ಟರೆ ಅವರು ಯಾರಿಗೂ ತಲೆಬಾಗಿದ್ದು ನಾನು ನೋಡಲಿಲ್ಲ. ನಿಜ ಅರ್ಥದಲ್ಲಿ ಭಾಗವತರಾಗಿ, ಘನತೆ ಗಾಂಭೀರ್ಯದ  ಭಾಗವತ ಭೀಷ್ಮರಾಗಿ ಮೆರೆದು ಬಿಟ್ಟರು. 

ಅವರೊಂದಿಗೆ ನನ್ನ ಅದ್ವೀತೀಯ ಅವಸ್ಮರಣೀಯ ಅನುಭವ ಎಂದರೆ ಬೆಂಗಳೂರಿನಲ್ಲಿ ಅವರಿಗೆ ನಾವು ಮಾಡಿದ ಸನ್ಮಾನ. ನಾವು ಮರೆಯುವಂತಿರಲಿಲ್ಲ. ಆದರೆ ಬಲಿಪ್ಪಜ್ಜನೂ ಅದನ್ನು ಮರೆಯಲಿಲ್ಲ. ಏನೂ ತಿಳಿಯದ ನಾವೂ ಕಾರ್ಯಕ್ರಮ ಮಾಡಿದೆವು. ನಾವೂ ದೊಡ್ಡ ಸಾಧನೆ ಮಾಡಿದಂತೆ ಹಿರಿ ಹಿಗ್ಗಿದೆವು. ನಿಜಕ್ಕಾದರೆ ಅದರ ಹಿಂದಿನ ಶಕ್ತಿ ಕೇವಲ ಬಲಿಪ ನಾರಾಯಣ ಭಾಗವತ ಎಂಬ ಹೆಸರು ಮಾತ್ರ. ನಿಜಕ್ಕಾದರೆ ಬೇರೆ ಯಾರ ಕಾರ್ಯಕ್ರಮ ಮಾಡುವುದಕ್ಕಿಂತ ಬಲಿಪ್ಪರ ಕಾರ್ಯಕ್ರಮ ಮಾಡುವುದು ಸುಲಭ. ಸಹಕಲಾವಿದರ ಬಗ್ಗೆ ಯೋಚಿಸಬೇಕಿಲ್ಲ, ಜನ ಸೇರುವ ಆತಂಕವಿಲ್ಲ. ಯಾಕೆಂದರೆ ಬಲಿಪ್ಪಜ್ಜ ಎಂದು ಬದಲಾಗುವುದಿಲ್ಲ. ಅದೇ ಸರಳತೆ, ಅದೇ ಗಾಂಭೀರ್ಯ ಇನ್ನು ಹತ್ತು ಹಲವು ವೈಶಿಷ್ಟ್ಯಗಳು ....ನಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಧನ ಸಂಗ್ರಹದಿಂದ ತೊಡಗಿ ಕಾರ್ಯಕ್ರಮ ಏರ್ಪಡಿಸುವ ತನಕವೂ ನಮ್ಮ ಶ್ರಮಕಿಂತಲೂ ಬಲವಾಗಿ ನಿಂತದ್ದು ಆ ನಾಮದ ಶಕ್ತಿ. ಅದೆಂತಹ ವ್ಯಕ್ತಿತ್ವ?  ಯಶಸ್ಸಿನ ಕಾರ್ಯಕ್ರಮ ಮುಗಿಸಿ ಅವರನ್ನು ಬೀಳ್ಕೊಟ್ಟ ಇರುಳು ನಾವಂತೂ ಸಂತೋಷದಲ್ಲಿ ನಿದ್ದೆ ಮಾಡಲಿಲ್ಲ. ಆದಿನ ಬಲಿಪ್ಪಜ್ಜನೂ ನಿದ್ದೆ ಮಾಡಲಿಲ್ಲ ಎಂಬುದು ಬಲಿಪ್ಪಜ್ಜ ನಮ್ಮ ಮೇಲಿಟ್ಟ ಪ್ರೀತಿಯ ಸಂಕೇತ. ಅಜ್ಜ ಬಿಟ್ಟು ಹೋದ ನೆನಪುಗಳಲ್ಲಿ ಇದು ಅತ್ಯಂತ ದೊಡ್ಡದು. ಒಂದೆರಡು ಸಲ ಅವರು ನಮ್ಮ ಮನೆಗೆ ಬಂದಿದ್ದರು. ಒಂದೆರಡು ದಿನ ತಂಗಿದ್ದರು. ನಮ್ಮ ಮನೆಯ ಪುಟ್ಟ ಮಕ್ಕಳು ಅವರ ತೊಡೆ ಮೇಲೆ ಏರಿ ಕುಳಿತಿದ್ದವು. ಛೇ ಅದೆಂತಹ ಅಕ್ಕರೆ. ಮನೆಯಲ್ಲಿ ಒಬ್ಬ ಹಿರಿಯಜ್ಜ ಹೀಗಿದ್ದರೆ ಅದೆಷ್ಟು ಸುಂದರ? ಬತ್ತದ ನೆನಪುಗಳು ಹಲವು. ಈಗ ಅದಕ್ಕೆಲ್ಲ ಅಂಕಗಳನ್ನು ಕೊಡುವುದಷ್ಟೆ ಉಳಿದಿದೆ. 

ಅಜಾತ ಶತ್ರು, ಸನ್ಮನಸ್ಸು, ಸಹೃದಯತೆ , ಉದಾರ ವ್ಯಕ್ತಿತ್ವ ಹೀಗೆ ಒಬ್ಬ ವ್ಯಕ್ತಿಯ ಉನ್ನತಿಗಳು ಏನೆಲ್ಲ ಇದೆಯೋ ಅದೆಲ್ಲವನ್ನು ಅರಗಿಸಿಕೊಂಡ ಮಹಾ ವ್ಯಕ್ತಿ. ಯಕ್ಷಗಾನ ಬಿಟ್ಟರೆ ಬಲಿಪ್ಪರಿಲ್ಲ. ಆದರೆ ನಾನು ಯಕ್ಷಗಾನವಲ್ಲದೇ ಬಲಿಪ್ಪರಲ್ಲಿ ಸಾಕಷ್ಟು ಕಂಡಿದ್ದೇನೆ. ಹೀಗೆ ಇರಲು ಸಾಧ್ಯವೇ ಅಂತ ಆಶ್ಚರ್ಯಪಟ್ಟಿದ್ದೇನೆ. ಬಲಿಪ್ಪಜ್ಜ ಇನ್ನೂ ಇರಬೇಕಿತ್ತು ಅಂತ ಅನಿಸುತ್ತದೆ. ಆದರೆ ಅದೂ ಅವರಿಗೆ ಒಂದು ಶಿಕ್ಷೆಯಾಗುತ್ತದೆ. ಯಾಕೆಂದರೆ ಮಹಾ ಭಾರತದ ಭೀಷ್ಮನಂತೆ, ಅಂತಿಮದಿನಗಳು   ಅತ್ಯಂತ ದುಃಖಕರವಾಗಿ ಕಳೆಯುವಂತಾಯಿತು. ಮೆಚ್ಚಿನ ಮಡದಿ ಅಗಲಿಹೋದರೆ, ತನ್ನ ಸರ್ವಸ್ವವನ್ನು ಧಾರೆ ಎರೆದು ಬೆಳೆಸಿದ ಮಗನನ್ನು ಕಳೆದುಕೊಂಡರು. ಯಕ್ಷಗಾನದ ಭೀಷ್ಮ ಅಂತ ಯಾಕೆ ಕರೆದರೊ, ಭೀಷ್ಮನಂತೆ ಕೊನೆಯಲ್ಲಿ ದುರಂತಮಯ ಕ್ಷಣಗಳು ಎದುರಾದದ್ದು ವಿಪರ್ಯಾಸ. 

ಹಲವರು ಹಲವು ರೀತಿಯಲ್ಲಿ ಅವರನ್ನು ಸ್ಮರಿಸಬಹುದು. ಆ ಸ್ಮರಣೆ ಸಾರ್ಥಕವಾಗಬೇಕಾದರೆ, ಅವರು ಉಳಿಸಿ ಕಾಯ್ದಿಟ್ಟ ಪರಂಪರೆ ಯಕ್ಷಗಾನದಲ್ಲಿ ಉಳಿಯಬೇಕು. ಎಷ್ಟು ಸಾಧ್ಯವೋ ಅಷ್ಟು. ಯಾಕೆಂದರೆ ಮೊನ್ನೆ ಮೊನ್ನೆಯ ತನಕವೂ ವಿಜ್ರಂಭಿಸಿದ ಆ ಪರಂಪರೆ ಇಲ್ಲವಾದರೆ ಯಕ್ಷಗಾನದಲ್ಲಿ ಮತ್ತೇನೂ ಉಳಿಯದೆ ಶುಷ್ಕವಾಗಿಬಿಡುತ್ತದೆ. ಯಾವ ಆಧುನೀಕತೆ, ಪರಿಷ್ಕಾರಕ್ಕೆ ಮಾರು ಹೋಗದೇ ಆ ಪರಂಪರೆ ಯಥಾವತ್ ಉಳಿಯುವುಂತಾಗಬೇಕು. ಅದು ಅವರಿಗೆ ಆತ್ಮಾರ್ಥವಾಗಿ ಸಲ್ಲಿಸುವ ಶ್ರಧ್ಧಾಂಜಲಿ. 





Friday, February 17, 2023

ನೆನಪು ಹಸಿರಾಗಲಿ

          ಬಲಿಪ್ಪರು ಕಂಗಾಲಾಗಿದ್ದಾರೆ, ಇತ್ತೀಚೆಗೆ ಮಿತ್ರ ಸುಬ್ಬಣ್ಣನ ಕರುಳನ್ನೇ ಸುಟ್ಟುಬಿಡುವ ಸಂದೇಶಗಳು ಪದೇ ಬರುತ್ತಿತ್ತು. ನಿರೀಕ್ಷಿತ ಘಳಿಗೆಯೋ ಬಯಸದ ಘಳಿಗೆಯೋ ಅಂತೂ ಅದು ಬಂದೇ ಬುಟ್ಡಿತು. ತಮ್ಮ‌ ಧರ್ಮಪತ್ನಿ ನಿಧನದ ನಂತರ ಬಲಿಪ್ಪರು ಇಳಿದೇ ಹೊಗಿದ್ದರು. ಕೇವಲ ಯಕ್ಷಗಾನ ಮಾತ್ರ ಅಷ್ಟೋ ಇಷ್ಟೋ ಉಸಿರಾಡುತ್ತಿತ್ತು. ಆದರೆ ಪುತ್ರ‌ ಪ್ರಸಾದ ಬಲಿಪರ ಅನಿರೀಕ್ಷಿತ ಅಗಲಿಕೆ ಅದೂ ಮಗ ಸಾವಿನ ಕದ ತಟ್ಟುವ ತನಕವೂ ಅರಿವಿಲ್ಲದೆ ಎದುರಾದ ದುರಂತ ಅವರನ್ನ ಅನಿರೀಕ್ಷಿತ ಆಘಾತಕ್ಕೆ ಎಳೆದು ತಂದಿತು. ಅಂದಿನಿಂದ ಬಲಿಪ್ಪರು ಜೀವನದ ಆಸಕ್ತಿಯನ್ನು ಸಂಪೂರ್ಣ ಕಳೆದುಕೊಂಡರು... ಅಂತೂ ಮತ್ತೆ ಬರೆಯುವುದಕ್ಕೆ ಅಕ್ಷರಗಳು ಸಿಗದೇ ಹೋಗುತ್ತದೆ.

            ಯಕ್ಷಗಾನ ಪರಂಪರೆಯ ಒಂದು ಆಖಂಡ ರೇಖೆ ಪೂರ್ಣ    ವಿರಾಮವನ್ನು ಹಾಕಿದೆ. ಭಾಗವತ ಶ್ರೇಷ್ಠ ಶ್ರೀ ಬಲಿಪ ನಾರಾಣ ಭಾಗವತ ಎಂಬ ಮಹಾ ಪರ್ವತ ಎಲ್ಲಾ ಕಲ್ಪನೆಗಳನ್ನು ಬಿಟ್ಡು  ಕುಸಿದಿದೆ.ಇಲ್ಲ ಎಂದರೆ ನಂಬಲಾಗುವುದಿಲ್ಲ. ಇದೆ ಎನ್ನಲು ನಾಲಗೆ ಚಲಿಸುತ್ತಿಲ್ಲ. 

             ಬಲ್ಲಿಪ್ಪಜ್ಜನ ಜತೆಗಿನ ನೆನಪುಗಳು ಅದು ಕೇವಲ ನೆನಪುಗಳಲ್ಲ. ನನಗೆ ಆಧ್ಯಾತ್ಮಿಕ ತೆಯ ಪಾಠಗಳು. ಸಮಚಿತ್ತದ ಸಮಭಾವದ ನಿರ್ವಿಕಲ್ಪದ ಮಹಾ ತಪಸ್ವಿ.

             ಅಜ್ಜ ಬಲಿಪ ಎಂದೂ ಸಿಟ್ಡಾಗಿದ್ದನ್ನು ನೋಡಿದವನಲ್ಲ. ನಗು ಎಂದಿಗೂ ಮಂದಹಾಸವನ್ನು ಮೀರಿದ ಉದಾಹರಣೆಗಳಿಲ್ಲ. ಕಿರುಚಾಡುವುದು ತಿಳಿಯದೆ ಇದ್ದ ಪರಮ ಸಾತ್ವಿಕ. ಮಾಹಾತಪಸ್ವಿಯಗುಣಗಳು ಅವರನ್ನೇ ಬಯಸಿ ಅವರಲ್ಲಿ ಅಡಕವಾಗಿದೆಯೇನೊ ಅನ್ನಿಸುತ್ತ್ರದೆ. ಪರಮ ಮುಗ್ಧ, ಪರಮ ಜ್ಞಾನಿ ಎರಡೂ ಅದ ವಿಸ್ಮಯ ವ್ಯಕ್ತಿತ್ವ ಬಹುಶಃ ‌ಇಂತಹ ಮನುಷ್ಯ ಮತ್ತೆ ಹುಟ್ಟಿ ಬರಲಾರ.‌

 
          ಅವರ ಮನೆಗೆ ಹೃದಯ ತುಂಬಿದ ಆತಿಥ್ಯವನ್ನು ಪಡೆದ ಘಳಿಗೆ ಹೊರಡುವಾಗ ಮನೆಯಲ್ಲೇ ಬೆಳೆದ ಸೌತೆ ತರಕಾರಿ ಚೀಲಕ್ಕೆಹಾಕಿ..ಇದ್ದು ನಾರ್ಲು ಪಣಸು ಹರ್ರಕೀ  ( ತೆಂಗಿನಕಾಯಿ ಹಲಸಿನ‌ಕಾಯಿ ಕೊಂಡು ಹೋಗುತ್ತಿಯಾ? ) ಎಂದು ಮಮತೆಯಿಂದ ಕೇಳಿದಾಗ ಈ ಬಲಿಪ್ಪರು .  ನನಗೆ ಎಲ್ಲವೂ ಅದ ಹಿರಿತನ ಅಜ್ಜ ಅನ್ನಿಸಿತ್ತು. ಜತೆಯಲ್ಲೆ ಕುಳಿತು ಕರಾಡ ಭಾಷೆಯಲ್ಲಿ ಮನೆ ಹಿರಿಯನಂತೆ ಉಪಚರಿಸಿ ಪಾಯಸ  ತಿನ್ನಿಸಿದ ಆ ಮಮತೆಯನ್ನು ಮರೆಯುವುದುಂಟೇ?

               ಎರಡು ಬಾರಿ ಬೆಂಗಳೂರಿಗೆ  ಬಂದಾಗ ನನ್ನ‌ ಮನೆಯಲ್ಲಿ ‌ಉಳಿದು ನಮ್ಮ ಮನೆ ಮಕ್ಕಳೊಂದಿಗೆ ಬೆರೆತ ತಾತ, ಯಕ್ಷಗಾನದ ಏನೂ ಅರಿವಿರದ ಮಕ್ಕಳೂ ಅಜ್ಜನ‌ ತೋಳಲ್ಲಿ ಬಂದಿಯಾದ ಕ್ಷಣಗಳು‌ಮರೆಯುವುದುಂಟೇ? ಮುಂಜಾನೆ ನನ್ನ‌ ಮಗಳು ಪ್ರಯಾಣದಲ್ಲಿ  ಇದ್ದ ನನಗೆ ಕರೆ ಮಾಡಿ  ಕಂಬನಿ ಮಿಡಿದರೆ ಆ ಬಲಿಪ್ಪಜ್ಜ ಮಕ್ಕಳ ಮೇಲೆ ಹಾಕಿದ ಮೋಡಿ ಎಂತಹುದು.?
ನನ್ನ ಜೀವಮಾನದ ಸಾಧನೆ ಎಂಬಂತೆ ಮಿತ್ತರ ಜತೆ ಸೇರಿ ಆಯೋಜಿಸಿದ ಸನ್ಮಾನ ತಾಳಮದ್ದಳೆ ಕಾರ್ಯಕ್ರಮ, ಅ ಕ್ಷಣದ ನಮ್ಮ ಖುಷಿ ಅಜ್ಜನ ಸಂತೋಷ ಮರೆಯುವುದುಂಟೇ?
ಹೀಗೆ ಪಟ್ಟಿ ಮಾಡುತ್ತಾ ಹೋದರೆ....ಇಲ್ಲ ಇಲ್ಲ ಅದು ನನಗೆ ಸಾಧ್ಯವಾಗುತ್ತಿಲ್ಲ. ತಳಮಳವನ್ನು ಅನಭವಿಸುವ ಸಾಮಾರ್ಥ್ಯ ಕ್ಷೀಣವಾಗಿದೆ.

                






. ಇನ್ನು ಕಾಣಲಾರದ ಕೇಳಲಾಗದ ಕಳೆದ ಘಳಿಗೆಗಳ ನೆನಪು ಅದೊಂದೆ ಮತ್ತೆ ಉಳಿದಿದೆ. ಅಜ್ಜ ನಿನೆಷ್ಟು ಹೃದಯವಂತ....ಮರೆಯದ ನಿನ್ನ ಹೃದಯಾಮೃತ ನಮ್ಮ ಬಾಳಿಗೆ ತೀರ್ಥವಾಗಿ ಚೇತನವಾಗಲಿ. 

Wednesday, November 30, 2022

ಮಾತಿನ ಮಾಂತ್ರಿಕ ಶ್ರೀ ಕುಂಬಳೆ ಸುಂದರ್ ರಾವ್

      



          ಸಮುದ್ರ ಮಥನ ಪ್ರಸಂಗದ ಒಂದು ಸನ್ನಿವೇಶ. ದುರ್ವಾಸ ಶಾಪಗ್ರಸ್ಥನಾಗಿ ದೇವೇಂದ್ರ ಸರ್ವವನ್ನು ಕಳೆದುಕೊಂಡು ಶ್ರೀಹರಿಯ ಮೊರೆ ಹೋಗುತ್ತಾನೆ. ಬಹಳ ಸ್ವಾರಸ್ಯಕರ ಸಂಭಾಷಣೆ ನಡೆಯುತ್ತದೆ. ನೂರು ಯಾಗ ಮಾಡಿ ಪುಣ್ಯ ಸಂಪಾದನೆ ಮಾಡಿ ತ್ರಿಮೂರ್ತಿಗಳ ಅನುಗ್ರಹದಿಂದ ದಕ್ಕಿದ ಇಂದ್ರ ಪದವಿ ಹೀಗಾದರೆ ಪುಣ್ಯ ಸಂಚಯನದ ಅರ್ಥವೇನು? ತ್ರಿಮೂತ್ರಿಗಳ ಅನುಗ್ರಹಕ್ಕೆ ಏನು ಮೌಲ್ಯ?  ದೇವೆಂದ್ರ ಕೇಳಿದಾಗ ಮಹಾವಿಷ್ಣು ನಿಷ್ಠೂರವಾಗಿ ಒಂದು ಮಾತು ಹೇಳುತ್ತಾನೆ. 

        "ದೇವೇಂದ್ರ,  ಜಗತ್ತಿನಲ್ಲಿ ಮೌಲ್ಯ ಯುತವಾಗಿರುವುದು ಹಲವಿದೆ. ಎಲ್ಲದಕ್ಕೂ ಮೌಲ್ಯ ಕೊಡುವುದು ಅನಿವಾರ್ಯ ಅಲ್ಲದಿರಬಹುದು. ಆದರೆ ದುರಹಂಕಾರಕ್ಕೆ ಮೂರ್ಖತನಕ್ಕೆ  ಪ್ರತಿಯೊಬ್ಬನೂ ಮೌಲ್ಯ ನೀಡುವುದಕ್ಕೆ ಬದ್ದನಾಗಿರಬೇಕು. ಇಂದು ನಿನ್ನ ಸ್ಥಿತಿಯೂ ಇದೇ ಆಗಿರುತ್ತದೆ. ದುರಹಂಕಾರಕ್ಕೆ ನೀನು ಕೊಡಬೇಕಾದ ಮೌಲ್ಯ ಈ ಪದಚ್ಯುತಿ" 

        ಶ್ರೀ ಮಹಾವಿಷ್ಣುವಿನ ಇಂತಹ ಅರ್ಥಗಾರಿಕೆಯಲ್ಲಿ  ಸಂದಾಯವಾಗುವ ಒಂದು ಸಂದೇಶ ಅದೆಷ್ಟು ಮೌಲ್ಯ ಉಳ್ಳದ್ದು ಎಂದು ಅರ್ಥವಾಗುತ್ತದೆ. ಮಹಾವಿಷ್ಣುವಿನ ಪಾತ್ರಕ್ಕೆ ಔಚಿತ್ಯಪೂರ್ಣವೆನ್ನಿಸುವ ಈ ಅರ್ಥಾಗಾರಿಕೆ ಬಾಲ್ಯದಲ್ಲಿ ಕಂಡ ಈ ಪಾತ್ರವನ್ನು ಚಿರಸ್ಮರಣೀಯ ಎನ್ನುವಂತೆ ಮಾಡಿದೆ. ಇಲ್ಲಿ ದೇವೇಂದ್ರನಾಗಿ ಶ್ರೀ ಎಂಪೆಕೆಟ್ಟೆ ರಾಮ ರೈ ಆದರೆ ಮಹಾವಿಷ್ಣುವಾಗಿ ಮಾತಿನ ಮಾಂತ್ರಿಕ ಶ್ರೀ ಕುಂಬಳೆ ಸುಂದರ್ ರಾವ್.  ನಾನು ಮೊತ್ತಮೊದಲು ನೋಡಿದ ಕುಂಬಳೆ ಸುಂದರ್ ರಾವ್ ರವರ ಪಾತ್ರ ಆ ಅರಿವಿನ ಕೊರತೆಯಲ್ಲೂ ಮಂತ್ರ ಮುಗ್ಧನನಾಗಿಸಿತ್ತು. ಮುಂದೆ ಶ್ರೀಕೃಷ್ಣ ನಂತಹ ಪಾತ್ರಗಳು ಇದ್ದರೆ ಅದಕ್ಕೆ ಪ್ರತಿರೂಪವಾಗಿ ಮೊದಲು ಕಂಡು ಬರುತ್ತಿದ್ದ ವೇಷವೆಂದರೆ ಅದು ಕುಂಬಳೆಯವರ ವೇಷ. ವೇಷ ಎಷ್ಟು ಸುಂದರವೋ ಮಾತುಗಾರಿಕೆ ಅದಕ್ಕಿಂತಲು ಸುಂದರ. ಹೀಗೆ ಸುಂದರ ವೆಂದರೆ ಅದು ಸುಂದರವೇ ಆಗಿ ಯಕ್ಷಗಾನ ರಂಗಸ್ಥಳದ ಮಾತಿನ ಪ್ರಪಂಚವನ್ನು ಆಳ್ವಿಕೆ ನಡೆಸಿದ್ದು ಗತ ಇತಿಹಾಸ. ಸ್ವರಶುದ್ಧಿ, ಶ್ರುತಿ ಲಯ ಬದ್ಧ ಸನ್ನಿವೇಶಕ್ಕೆ ಹೊಂದಿಕೊಂಡ ಸಂಭಾಷಣೆ ಎಲ್ಲವೂ ಒಂದು ಕಡೆಯಲ್ಲಿ ಸೇರಿ ತೆಂಕು ತಿಟ್ಟು ಯಕ್ಷಗಾನಕ್ಕೆ ಅರ್ಥಗಾರಿಕೆಗೆ ಪ್ರಾತಿನಿಧಿಕ ಸೌಂದರ್ಯವನ್ನು ಕೊಟ್ಟದ್ದು ಇವರ ಕಾಲದಲ್ಲಿ. 

        ರಣ ವೀಳ್ಯ ಕರ್ಣ ಭೇದನ, ಸಂಗೀತಾ ಸಂಸ್ಥೆ ಹೊರತಂದ ಧ್ವನಿಸುರುಳಿಯನ್ನು ಕೇಳದ ಯಕ್ಷಗಾನ ರಸಿಕರು ಇರಲಾರರು. ಬಲಿಪ ನಾರಾಯಣ ಭಾಗವತರ ಸಾರಥ್ಯದಲ್ಲಿ ಮೂಡಿ ಬಂದ ಕಲಾಕೃತಿ ಆ ಕಾಲದಲ್ಲಿ ಅದ್ಭುತ ಸಂಚಲವನ್ನು ಸೃಷ್ಟಿಸಿತ್ತು. ಅದರಲ್ಲಿ ಕರ್ಣನಾಗಿ ಕುಂಬಳೆಯವರ ಅರ್ಥಗಾರಿಗೆ ಪ್ರಖರವಾಗಿ ಭಾವಾನಾತ್ಮಕವಾಗಿ ಪರಿಣಾಮ ಬೀರಿತ್ತು. ಕೊನೆಯಲ್ಲಿ ತಾಯಿಕುಂತಿಯಲ್ಲಿ ಕರ್ಣ ಹೇಳುವ ಮಾತಿದೆ....ಕಾಡ್ತಿಯಾ ತಾಯಿ, ಇದನ್ನು ಕೇಳುವಾಗ ಕಣ್ಣಂಚಿನಲ್ಲಿ ಕಂಬನಿ ಮಿಡಿಯುತ್ತದೆ.  ಇದು ಕುಂಬಳೆಯವರ ಅರ್ಥಗಾರಿಕೆಯ ಝಲಕ್ ಅಷ್ಟೆ. ಅದರ ಪೂರ್ಣ ಪ್ರತ್ಯಕ್ಷವಾಗಬೇಕಾದರೆ ರಂಗಸ್ಥಳದ ಮುಂದೆ ನಿಲ್ಲಬೇಕು. 

        ಮೊದಲು ಧರ್ಮಸ್ಥಳ ಮೇಳದ ಆಟಗಳಲ್ಲಿ ನನಗೆ ಮೊತ್ತ ಮೊದಲ ಆಕರ್ಷಣೆ ಎಂದರೆ ಕುಂಬಳೆ ರಾಯರ ವೇಷಗಳು. ಚಕ್ರವರ್ತಿ ದಶರಥದ, ದಶರಥನ ಪಾತ್ರ,  ಮಹಾರ್ಥಿ ಕರ್ಣದ ಕರ್ಣನ ಪಾತ್ರ, ಅಮರೇಂದ್ರ ಪಥ ವಿಜಯಿಯ ಸತ್ಯವೃತನ ಪಾತ್ರ ಹಾಗೆ ಸಾಮ್ರಾಟ್ ನಹುಷೇಂದ್ರದ ನಹುಷ್ಯ ಚಕ್ರವರ್ತಿಯ ಪಾತ್ರ , ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗಡೆಯ ಪಾತ್ರ ಇವುಗಳೆಲ್ಲವೂ ನನಗೆ ಅವಿಸ್ಮರಣೀಯ ಅನುಭವವನ್ನು ಕೊಟ್ಟಿತ್ತು. ಈಗಲೂ ಈ ಪ್ರಸಂಗಗಳು ನೋಡುವಾಗ ಈ ಪಾತ್ರಗಳನ್ನು ಕುಂಬಳೆಯವರ ಪಾತ್ರದೊಂದಿಗೆ ತುಲನೆ ಮಾಡುತ್ತೇನೆ. 

        ಪ್ರಾಸ ಭರಿತ ಅರ್ಥಗಾರಿಕೆಗೆ ಸುಂದರ್ ರಾವ್ ಅವರು ಅನ್ವರ್ಥ. ಅದು ಹೇಗೆ ಎಲ್ಲಿಂದ ಪುಂಖಾನುಪುಂಖವಾಗಿ ಹರಿದು ಬರುತ್ತದೋ ಪ್ರೇಕ್ಷಕ ಗಾಬರಿಯಾಗುತ್ತಾನೆ. ಅದರಂತೆ ಭಾವನಾತ್ಮಕವಾದ ಮಾತುಗಾರಿಕೆಯಲ್ಲಿ ದಶರಥ ಕರ್ಣ ನಂತಹ ಪಾತ್ರಗಳು ಎದುರಿದ್ದ ಪ್ರೇಕ್ಷಕನ ಭಾವನಾತ್ಮಕ ಮನಸ್ಸಿನ ಆಳವನ್ನು ಪರೀಕ್ಷೆ ಮಾಡುತ್ತವೆ. ಇಲ್ಲಿ ಹೃದಯ ತುಂಬಿ ಕಂಬನಿ ಮಿಡಿಯದ ಪ್ರೇಕ್ಷಕ ಸಿಗುವುದು ಅಪರೂಪ. ಸಾಮಾನ್ಯವಾಗಿ ತುಂಬ ಮಾತನಾಡುವವರು ಬಂದಾಗ ತಲೆ ಹಣ್ಣಾಗದ ಪ್ರೇಕ್ಷಕ ಚಹ ಕುಡಿಯುವುದಕ್ಕೆ ಎದ್ದು ಹೋಗುವುದು ಸಾಮಾನ್ಯ. ಆದರೆ ಕುಂಬಳೆಯವರ ಪ್ರವೇಶ ಆದರೆ ಡೇರೆಯ ಹೊರಗಿದ್ದ ಪ್ರೇಕ್ಷಕ ಬಂದು ಕುಳಿತು ಬಿಡುತ್ತಾನೆ. ಮತ್ತವನು ಕದಲುವುದೇ ಇಲ್ಲ. ಇದು ಇವರ ಅರ್ಥಗಾರಿಕೆಯ ವೈಶಿಷ್ಟ್ಯ. ಪ್ರೇಕ್ಷಕನ ಭಾವನೆಗಳ ನಾಡಿ ಮಿಡಿತವನ್ನು ಬಲ್ಲವರು ಇವರು. 

        ಇಂತಹ ಮಹಾನ್ ಕಲಾವಿದ ಇಂದು ಅಗಲಿದ ವಾರ್ತೆ ಕೇಳಿದಾಗ ಇವರ ದಶರಥಾದಿ ಕರ್ಣನ ಪಾತ್ರಗಳು ಮತ್ತೆ ಕಣ್ಣ ಮುಂದೆ ಬಂದು ನಿಂತವು. ಸುಂದರ ಸುಸ್ವರದ ಆ ಅರ್ಥಗಾರಿಕೆ ಕಿವಿಯಲ್ಲಿ ಮಾರ್ದನಿ ಗೈದಂತೆ ಭಾಸವಾಯಿತು. ಬಾಲ್ಯದಲ್ಲಿ ಯಕ್ಷಗಾನದ ಬಗ್ಗೆ ಆಕರ್ಷಣೆ ಮೂಡಿಸುವಲ್ಲಿ ಇವರ ಪಾತ್ರಗಳು ಗಣನೀಯವಾಗಿ ಮನಸ್ಸಿಗೆ ಹತ್ತಿರವಾಗಿದೆ. ಇವರು ಇಲ್ಲ ಎಂದು ತಿಳಿಯುವುದೇ ಒಂದು ನಷ್ಟ. ಭಾವಾನೆಗಳ ಚಕ್ರವರ್ತಿಗೆ ಭಾವನಾತ್ಮಕ ಶ್ರಧ್ದಾಂಜಲಿ ಮನಸ್ಸು ತುಂಬಿ ಅರ್ಪಿಸೊಣ. ರಾಯರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ.